ಕ್ರೀಡೆಗಳು

ಸ್ವಿಂಗ್‌ ಆಗುತ್ತಿಲ್ಲ… ಬೌಲಿಂಗ್‌ ವೇಳೆ ಜಸ್ಪ್ರೀತ್‌ ಬುಮ್ರಾ ಹತಾಶೆ

ಮೊದಲ ದಿನ ಕೆಲವೇ ಓವರ್‌ಗಳ ಆಟ ನಡೆದಿದ್ದು, ಈ ವೇಳೆ ಪಿಚ್‌ ಬೌಲರ್‌ಗಳಿಗೆ ನೆರವು ನೀಡುತ್ತಿಲ್ಲ ಎಂದು ಟೀಂ ಇಂಡಿಯಾ ವೇಗಿ ಜಸ್ಪ್ರೀತ್‌ ಬುಮ್ರಾ ಹತಾಶೆ ಹೊರಹಾಕಿದಾರೆ.

ಬ್ರಿಸ್ಬೇನ್‌: ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮೂರನೇ ಪಂದ್ಯದ ಮೊದಲ ದಿನ ಮಳೆಯದ್ದೇ ಆಟ. ಮಳೆಯಿಂದಾಗಿ ಮೊದಲ ದಿನದಾಟ ರದ್ದಾಗಿದೆ. ಇನ್ನು ಮೊದಲ ದಿನ ಕೆಲವೇ ಓವರ್‌ಗಳ ಆಟ ನಡೆದಿದ್ದು, ಈ ವೇಳೆ ಪಿಚ್‌ ಬೌಲರ್‌ಗಳಿಗೆ ನೆರವು ನೀಡುತ್ತಿಲ್ಲ ಎಂದು ಟೀಂ ಇಂಡಿಯಾ ವೇಗಿ ಜಸ್ಪ್ರೀತ್‌ ಬುಮ್ರಾ ಹತಾಶೆ ಹೊರಹಾಕಿದಾರೆ.

ಬ್ರಿಸ್ಬೇನ್‌ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಕೇವಲ 13.2 ಓವರ್‌ಗಳ ಆಟ ಮಾತ್ರ ನಡೆದಿದೆ. ಇನ್ನು ಟಾಸ್‌ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದರು. ಆದರೆ ರೋಹಿತ್‌ ನಿರೀಕ್ಷೆಯಂತೆ ಪಿಚ್‌ ಬೌಲರ್‌ಗಳಿಗೆ ನೆರವು ನೀಡಲಿಲ್ಲ. ಪಿಚ್‌ನಿಂದ ಬೌಲರ್‌ಗಳಿಗೆ ಯಾವುದೇ ನೆರವು ಸಿಗುತ್ತಿಲ್ಲ ಎಂದು ಸ್ವತಃ ಉಪನಾಯಕ ಜಸ್ಪ್ರೀತ್‌ ಬುಮ್ರಾ ಹತಾಶೆ ವ್ಯಕ್ತಪಡಿಸಿದಾರೆ.

ಬೌಲಿಂಗ್‌ ಆರಂಭಿಸಿದ ಬುಮ್ರಾ  ಮತ್ತು ಮೊಹಮ್ಮದ್‌ ಸಿರಾಜ್‌ ಲಯ ಕಂಡುಕೊಳ್ಳಲು ಪರದಾಡಿದರು. ಎಷ್ಟೇ ಉತ್ತಮವಾಗಿ ಬೌಲಿಂಗ್‌ ಮಾಡಲು ಪ್ರಯತ್ನಿಸಿದರೂ ಅವರಿಗೆ ಪಿಚ್‌ನಿಂದ ಬೆಂಬಲ ಸಿಗಲಿಲ್ಲ. ಇನ್ನು ಈ ವಿಚಾರವಾಗಿ ಸಹ ಆಟಗಾರನ ಜತೆ ಮಾತನಾಡಿದ ಬುಮ್ರಾ ಎಲ್ಲೇ ಬೌಲಿಂಗ್‌ ಮಾಡಿದರೂ ಸ್ವಿಂಗ್‌ ಆಗುತ್ತಿಲ್ಲ, ಪಿಚ್‌ನಿಂದ ನೆರವು ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. ಬುಮ್ರಾ ಸಹ ಆಟಗಾರನಿಗೆ ಸ್ವಿಂಗ್‌ ಆಗುತ್ತಿಲ್ಲ ಎಂದು ಹೇಳಿರುವುದು ಸ್ಟಂಪ್‌ ಮೈಕ್‌ನಲ್ಲಿ ಸೆರೆಯಾಗಿದೆ.

ರೋಹಿತ್‌ ಶರ್ಮಾ ಬೌಲಿಂಗ್‌ ಆಯ್ಕೆ ಮಾಡಿಕೊಂಡ ಕುರಿತು ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಕಳೆದ ಕೆಲವು ವಾರಗಳಿಂದ ಬ್ರಿಸ್ಬೇನ್‌ ನಲ್ಲಿ 12 ಇಂಚು ಮಳೆ ಬಂದಿದೆ. ಹಾಗಾಗಿ ಪಿಚ್‌ ನಲ್ಲಿ ಬೌಲಿಂಗ್‌ಗಿಂತ ಹೆಚ್ಚಾಗಿ ಬ್ಯಾಟಿಂಗ್‌ಗೆ ನೆರವು ಸಿಗುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್‌ ಅಭಿಪ್ರಾಯಪಟ್ಟಿದಾರೆ.