ವಿಜಯಪುರ: ಯುವಕ ಚುಡಾಯಿಸಿದ್ದಕ್ಕೆ ಮನನೊಂದು ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುದ್ದೇಬಿಹಾಳದಲ್ಲಿ ನಡೆದಿದೆ. ಕಳೆದ ಹಲವು ದಿನಗಳಿಂದ ಸಂಗಮೇಶ ಜುಂಜವಾರ ಎಂಬ ಯುವಕ ಅಪ್ರಾಪ್ತೆಯ ಹಿಂದೆ ಬಿದ್ದಿದ್ದನು. ಕಾಲೇಜಿಗೆ ತೆರಳುತ್ತಿದ್ದ ವೇಳೆ ಹಿಂಬಾಲಿಸಿ ಚುಡಾಯಿಸುತ್ತಿದ್ದನು. ಪ್ರೀತಿ ಪ್ರೇಮದ ಹೆಸರಿನಲ್ಲಿ ಬಾಲಕಿಗೆ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿಬಂದಿದೆ.
ಅಲ್ಲದೇ, ಇತ್ತೀಚೆಗೆ ಬಾಲಕಿ ಕಾಲೇಜಿಗೆ ಹೋಗುವಾಗ ಮೈ-ಕೈ ಮುಟ್ಟಿ ಮಾತನಾಡಿಸಿದ್ದನು. ಇದನ್ನು ಪ್ರಶ್ನೆ ಮಾಡಿದ್ದ ಬಾಲಕಿಯ ಸಹೋದರಿಗೆ ಸಂಗಮೇಶ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದನು ಎಂಬ ಆರೋಪವಿದೆ. ಈ ಕುರಿತು ಬಾಲಕಿ ನವೆಂಬರ್ 27 ರಂದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಸಂಗಮೇಶ ಜುಂಜವಾರ, ಮೌನೇಶ ಮಾದರ, ಚಿದಾನಂದ ಕಟ್ಟಿಮನಿ ವಿರುದ್ಧ ದೂರು ನೀಡಿದ್ದಳು. ಆದ್ರೆ ಯುವಕನ ಕಿರುಕುಳಕ್ಕೆ ಬೇಸತ್ತು ಬಾಲಕಿ ನೇಣಿಗೆ ಕೊರಳೊಡ್ಡಿದ್ದಾಳೆ.
ಸದ್ಯ ಮುದ್ದೇಬಿಹಾಳ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಆದ್ರೆ ಒಂದು ತಿಂಗಳ ಅಂತರದಲ್ಲಿ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಎರಡನೇ ಪೋಕ್ಸೋ ಕೇಸ್ ದಾಖಲಾಗಿದೆ.