ರಾಮನಗರ : ನಿಖಿಲ್‌ಕುಮಾರಸ್ವಾಮಿ ಅವರನ್ನ ನಿಮ್ಮ ಮಡಿಲಿಗೆ ಹಾಕಿದ್ದೇನೆ. ನಿಮ್ಮ ತೀರ್ಮಾನಕ್ಕೆ ಅವನನ್ನ ಬಿಟ್ಟಿದ್ದೇನೆ. ನಾವೇನಾದ್ರೂ ರೈತರ ಪರವಾಗಿ ಕೆಲಸ ಮಾಡಿದ್ರೆ ನಿಖಿಲ್ ರನ್ನ ಗೆಲ್ಲಿಸಿಕೊಡಿ ಎಂದು ಪುತ್ರನ ಪರವಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮತಪ್ರಚಾರ ನಡೆಸಿದ್ದಾರೆ.
ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಕಳೆದ 2018ರಲ್ಲಿ ನಿಮ್ಮೆಲ್ಲರ ಆಶಯದಂತೆ ಸ್ಪರ್ಧೆ ಮಾಡಿದ್ದೆ. ಬಳಿಕ ಮತ್ತೆ 2023ರಲ್ಲಿ ನೀವೇ ಆಯ್ಕೆ ಮಾಡಿದ್ರಿ. ಆದರೆ ಲೋಕಸಭಾ ಚುನಾವಣೆಯಲ್ಲಿ ಅನಿವಾರ್ಯವಾಗಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದೆ. ನಾನು ಪ್ರಚಾರಕ್ಕೆ ಹೋಗದಿದ್ರೂ ಜನ ನನ್ನನ್ನ ಗೆಲ್ಲಿಸಿದ್ರು. ಚನ್ನಪಟ್ಟಣದಲ್ಲಿ ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಕ್ಷೇತ್ರದಲ್ಲಿ ಎಷ್ಟು ಕೆರೆ ಇದೆ ಅಂತ ಗೊತ್ತಿಲ್ಲ ಅಂದವ್ರೆ. ಬಹುಶಃ ಕುಮಾರಸ್ವಾಮಿ ಅವರಿಗೆ ಗೊತ್ತಿರುವಷ್ಟು ಅವರಿಗೆ ಗೊತ್ತಿಲ್ಲ. ಯಾರೋ ಸ್ವಯಂ ಘೋಷಿತ ಆಧುನಿಕ ಭಗೀರಥ ಅಂತೆ ಎಂತೆ ಎಂದು ಸಿಪಿ ಯೋಗೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ನೀಡಿದ್ದೇನೆ. ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೇನೆ. ತಿಟ್ಟಮಾರನಹಳ್ಳಿ ನನಗೆ ಹೊಸದೇನಲ್ಲ. ನಿಮ್ಮೆಲ್ಲರನ್ನೂ ನಂಬಿದ್ದೇನೆ, ನಿಮ್ಮ ಕುಟುಂಬದ ಮಗ ಅಂತ ಅವನನ್ನ ಗೆಲ್ಲಿಸಿಕೊಡಿ. ಎರಡು ಬಾರಿ ಕಾಂಗ್ರೆಸ್ ಕುತಂತ್ರದಿಂದ ಸೋತಿದ್ದಾನೆ. ನವೆಂಬರ್ 13 ನೇ ತಾರೀಖು ನಡೆಯುವ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಮತ ನೀಡಿ. ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡುತ್ತೆ. ಚುನಾವಣೆ ಕೊನೆ ದಿನ ಟೋಕನ್ ಹಂಚುತ್ತಾರೆ. ಅದಕ್ಕೆ ಜನ ಮರುಳಾಗದೇ ನಿಖಿಲ್ ಗೆಲ್ಲಿಸಿ ಎಂದು ಮತದಾರರಿಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.