ರಾಮನಗರ : ಹದಿನೇಳು ಕೆರೆಗಳಿಗೆ ನಿರುವ ನೀರು ತುಂಬಿಸಿದ ವ್ಯಕ್ತಿಯನ್ನು ಭಗೀರಥ ಎನ್ನುವುದಾದರೆ, 107 ಕೆರೆಗಳಿಗೆ ನೀರು ತುಂಬಿಸಿದರನ್ನು ಏನೆಂದು ಕರೆಯಬೇಕು? ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಸಂಸದ ಸುರೇಶ್ ಸವಾಲು ಹಾಕಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು; ಚನ್ನಪಟ್ಟಣಕ್ಕೆ ಸುರೇಶ್ ಕೊಡುಗೆ ಏನು? ದಿನವೂ ರಾತ್ರಿ ಮತ್ತಿಕೆರೆ ಹತ್ತಿರ ಲೋಡುಗಟ್ಟಲೇ ಕಲ್ಲು ಬರುತ್ತಲ್ಲಾ.. ಹೀರಾ ದೇಶಕ್ಕೆ ಕಳಿಸುವುದಕ್ಕೆ.. ಅದೇ ಅವರ ಕೊಡುಗೆ. ಅಂತಹವರ ಜತೆ ನಾನು ಬಹಿರಂಗ ಚರ್ಚೆಗೆ ಬರಬೇಕಾ? ಎಂದು ತಿರುಗೇಟು ಕೊಟ್ಟರು. ನಿಖಿಲ್ ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದನ್ನೇ ಲೇವಡಿ ಮಾಡುವ ಕಾಂಗ್ರೆಸ್ ನಾಯಕರ ಮೇಲೆ ಚಾಟಿ ಬೀಸಿದ ಅವರು, ಅವರಿಗೆ ಕಣ್ಣೀರೇ ಬರುವುದಿಲ್ಲವೇ? ಕಣ್ಣೀರು ಬರದಿದ್ದರೆ ಅವರು ಮನುಷ್ಯರೇ ಅಲ್ಲ.. ಎಂದು ಹೇಳಿದರು.
ಚನ್ನಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಸೇರಿದ ಮುಖಂಡರನ್ನು ಬರಮಾಡಿಕೊಂಡ ನಂತರ ಕೇಂದ್ರ ಸಚಿವರು ಮಾತನಾಡಿ, ನಾನು ಮುಖ್ಯಮಂತ್ರಿಯಾಗಿ ಹಾಗೂ ಐದು ವರ್ಷ ಚನ್ನಪಟ್ಟಣ ಶಾಸಕನಾಗಿ ನಾನು 107 ಕೆರೆಗಳಿಗೆ ನೀರು ತುಂಬಿಸಿದ್ದೇನೆ. ಅವರದೇ ಸರ್ಕಾರ ಇದೆ, ಕಡತಗಳನ್ನು ತೆಗೆದು ನೋಡಲಿ. ನಾನು ನಾನು ಹದಿನೇಳು ಕೆರೆಗಳಿಗೆ ನೀರು ತುಂಬಿಸಿದೆ ಎಂದು ಹೇಳುತ್ತಾರೆ, ಆದರೆ 107 ಕೆರೆಗಳಿಗೆ ನೀರು ತುಬಿಸಿದ್ದನ್ನು ಇವರು ಯಾಕೆ ಮರೆ ಮಾಚುತ್ತಾರೆ? ನಿಜ ಹೇಳುವುದಕ್ಕೆ ಏನಾಗಿದೆ ಅವರಿಗೆ? ಕಡತ ಇಲ್ಲವೇ? ಆದೇಶಗಳು ಇಲ್ಲವೇ? ತೆರೆದು ನೋಡಲಿ ಎಂದು ಅವರು ಕಿಡಿಕಾರಿದರು.
ದೇವೇಗೌಡರು ಇಗ್ಗಲೂರು ಜಲಾಶಯ ಕಟ್ಟಿಸದಿದ್ದರೆ ಇವರು ಹದಿನೇಳು ಕೆರೆಗಳಿಗೆ ನೀರು ತುಂಬಿಸಲು ಸಾಧ್ಯ ಆಗುತ್ತಿತ್ತಾ? ಇವತ್ತು ಚನ್ನಪಟ್ಟಣ, ರಾಮನಗರ ತಾಲ್ಲೂಕಿನ ಜನರಿಗೆ ಆ ಜಲಾಶಯ ಜೀವನಾಧಾರವಾಗಿದೆ. ಅದನ್ನೇಕೆ ಇವರು ಹೇಳುವುದಿಲ್ಲ? ಹಾಗಾದರೆ ಒಂದು ಬೃಹತ್ ಜಲಾಶಯವನ್ನೇ ಕಟ್ಟಿಸಿದ ದೇವೇಗೌಡರನ್ನು ಏನೆಂದು ಕರೆಯಬೇಕು? 107 ಕೆರೆಗಳಿಗೆ ನೀರು ತುಂಬಿಸಿದ ನನ್ನನ್ನು ಏನೆಂದು ಕರೆಯಬೇಕು? ನಾವೂ ಭಗೀರಥರು ಎಂದು ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದೇವೆಯೇ? ಎಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.