ಚನ್ನಪಟ್ಟಣ : ಮೈಸೂರು ರಾಜ ಮನೆತನದ ಬಗ್ಗೆ ಈ ಸರ್ಕಾರ ದ್ವೇಷ ಸಾಧನೆ ಮಾಡುತ್ತಿದೆ. ರಾಜ್ಯದ ಅಭಿವೃದ್ಧಿಗೆ ಮಹೋನ್ನತ ಕೊಡುಗೆ ನೀಡಿರುವ ಆ ಕುಟುಂಬಕ್ಕೆ ಕಿರುಕುಳ ನೀಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಕೂಡ್ಲೂರು ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಚಾಮುಂಡೇಶ್ವರಿ ತಾಯಿ ಅರಸು ಮನೆತನದ ದೇವತೆ. ಅವರ ಕುಟುಂಬದ ಆರಾಧ್ಯದೈವ. ಅವರ ಮನೆತನದಿಂದ ದೇವರನ್ನು ದೂರ ಮಾಡುವ ಕೇಡಿನ ಕೆಲಸ ಈ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ರಾಜ ವಂಶಸ್ಥರು ಹಾಗೂ ಮೈಸೂರು ಕೊಡಗು ಕ್ಷೇತ್ರದ ಲೋಕಸಭೆ ಸದಸ್ಯರಾದ ಶ್ರೀ ಯದುವೀರ್ ಒಡೆಯರ್ ಅವರು ಕೂಡ ಉಪಸ್ಥಿತರಿದ್ದರು.
ಈ ಬಗ್ಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಪುಣ್ಯಕ್ಷೇತ್ರ ಅರಸರ ಉಸ್ತುವಾರಿತಲ್ಲಿಯೇ ಇತ್ತು. ಆ ಕ್ಷೇತ್ರದ ಅಭಿವೃದ್ಧಿಗೆ ಒಡೆಯರ್ ಸಾಕಷ್ಟು ಕೆಲಸ ಮಾಡಿದೆ. ರಾಜ್ಯದ ಅಭಿವೃದ್ಧಿಗೆ, ನೀರಾವರಿ, ಶಿಕ್ಷಣ, ಕೈಗಾರಿಕಾಭಿವೃದ್ಧಿಗೆ ಮಹಾರಾಜರು ಅನನ್ಯ ಕೊಡುಗೆ ನೀಡಿದ್ದಾರೆ. ಅಂತಹ ಕುಟುಂಬಕ್ಕೆ ಸಿದ್ದರಾಮಯ್ಯ ಇನ್ನಿಲ್ಲದ ಕಿರುಕುಳ ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಯಿಯ ಸನ್ನಿಧಾನದಲ್ಲಿ ನಡೆಯುತ್ತಿದ್ದ ಕೈಂಕರ್ಯಗಳನ್ನು ಶ್ರದ್ಧಾ ಭಕ್ತಿಗಳಿಂದ ನೋಡಿಕೊಳ್ಳುತ್ತಿತ್ತು. ಅಂತಹ ಕುಟುಂಬಕ್ಕೆ ಧಕ್ಕಿದ್ದ ದೇವರ ಸೇವೆ ಅವಕಾಶವನ್ನು ಸಿದ್ದರಾಮಯ್ಯ ಸರ್ಕಾರ ಕಿತ್ತುಕೊಂಡಿದೆ ಎಂದು ಅವರು ಆರೋಪ ಮಾಡಿದರು.