ಕ್ರೀಡೆಗಳು

IND VS BAN: ಚಾಂಪಿಯನ್ಸ್‌ ಟ್ರೋಫಿ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾ ಸಂಭಾವ್ಯ ಪಟ್ಟಿ ಇಂತಿವೆ..

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ, ಫೆಬ್ರವರಿ 20ರಿಂದ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಅಭಿಯಾನವನ್ನು ಮುಂದುವರಿಸಲಿದೆ

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ, ಫೆಬ್ರವರಿ 20ರಿಂದ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಅಭಿಯಾನವನ್ನು ಮುಂದುವರಿಸಲಿದೆ. ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಪಂದ್ಯ ಭಾರತ ಮತ್ತು ಬಾಂಗ್ಲಾದೇಶ ಎರಡಕ್ಕೂ ಬಹಳ ಮುಖ್ಯವಾಗಿದ್ದು, ಉಭಯ ತಂಡಗಳು ತಮ್ಮ ಚೊಚ್ಚಲ ಪಂದ್ಯವನ್ನು ಗೆಲುವಿನೊಂದಿಗೆ ಶುಭಾರಂಭ ಮಾಡಲು ಅಖಾಡಕ್ಕೆ ಇಳಿಯಲಿದೆ . ಆದರೆ ಗಾಯದ ಸಮಸ್ಯೆಯಿಂದ ಚಾಂಪಿಯನ್ಸ್ ಟ್ರೋಫಿಯಿಂದ ಹೊರನಡೆದಿರುವ, ಈ ಟೂರ್ನಿಯಲ್ಲಿ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾರ ಅನುಪಸ್ಥಿತಿ ತಂಡಕ್ಕೆ ಖಂಡಿತವಾಗಿಯೂ ಕಾಡಲಿದೆ. ಭಾರತ ತನ್ನ ಮೊದಲ ಪಂದ್ಯಕ್ಕೆ ಆಡುವ ಹನ್ನೊಂದರ ತಂಡವನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಾಗಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಮೈದಾನದಲ್ಲಿ ಕಾಣಬಹುದಾದ ಆ 11 ಸಂಭಾವ್ಯ ಆಟಗಾರರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. 
ಭಾರತದ ಅಗ್ರ ಕ್ರಮಾಂಕದಲ್ಲಿ ನಾಯಕ ರೋಹಿತ್ ಶರ್ಮಾ, ಉಪನಾಯಕ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಇರುವುದು ಖಚಿತ. ರೋಹಿತ್ ಮತ್ತು ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇದಾದ ನಂತರ ಶ್ರೇಯಸ್ ಅಯ್ಯರ್ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬರಲಿದ್ದಾರೆ. ಇದರ ನಂತರ ಭಾರತ ತಂಡವು ಕೆ.ಎಲ್.ರಾಹುಲ್ ಮತ್ತು ರಿಷಭ್ ಪಂತ್ ರೂಪದಲ್ಲಿ ಇಬ್ಬರು ಬಲಿಷ್ಠ ವಿಕೆಟ್ ಕೀಪರ್-ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಬಾಂಗ್ಲಾದೇಶದ ವಿರುದ್ಧ ಪಂತ್ ಮತ್ತು ಕೆ.ಎಲ್.ರಾಹುಲ್ ಇಬ್ಬರಲ್ಲಿ ಯಾರಿಗೆ ಅವಕಾಶ ನೀಡಬೇಕೆಂದು ನಿರ್ಧರಿಸುವುದು ತಂಡದ ಆಡಳಿತ ಮಂಡಳಿ ಮತ್ತು ನಾಯಕ ರೋಹಿತ್ ಶರ್ಮಾ ಮುಂದಿರುವ ಬಹುದೊಡ್ಡ ಸವಾಲಾಗಿದೆ. 
ರಿಷಭ್ ಪಂತ್ ತಮ್ಮ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಆದರೆ ರಾಹುಲ್ ಈ ಸ್ವರೂಪದಲ್ಲಿ ಹೆಚ್ಚು ವಿಶ್ವಾಸಾರ್ಹ ಬ್ಯಾಟ್ಸ್‌ಮನ್. 2023ರ ಏಕದಿನ ವಿಶ್ವಕಪ್‌ನಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಿದರು. 452 ರನ್ ಗಳಿಸಿದ್ದ ಅವರು ವಿಕೆಟ್ ಕೀಪಿಂಗ್ ಕೂಡ ಮಾಡಿದ್ದರು. ಆದರೆ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಅವರು ಬ್ಯಾಟಿಂಗ್‌ನಲ್ಲಿ ವಿಶೇಷ ಸಾಧನೆ ಕಂಡು ಬಂದಿಲ್ಲ. ಇಂಗ್ಲೆಂಡ್ ವಿರುದ್ಧ ಅವರು 2, 10 ಮತ್ತು 40 ರನ್ ಗಳಿಸಿದರು. ಇದರ ಹೊರತಾಗಿಯೂ ಪಂತ್ ಇಂಗ್ಲೆಂಡ್ ವಿರುದ್ಧ ಒಂದೇ ಒಂದು ಪಂದ್ಯವನ್ನು ಆಡದ ಕಾರಣ ರಾಹುಲ್ ಆಡುವ XIರಲ್ಲಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಆಡುವ 11ರಲ್ಲಿರುವ ಆಟಗಾರರ ಸಂಯೋಜನೆಯನ್ನು ನೋಡಿದರೆ, ರಾಹುಲ್‌ಗೆ ಅವಕಾಶ ಸಿಗುವ ಹೆಚ್ಚಿನ ಅವಕಾಶವಿದೆ ಎಂದು ತೋರುತ್ತದೆ. ಹಾರ್ದಿಕ್ ಪಾಂಡ್ಯ ಸ್ಥಾನವೂ ಖಚಿತವಾಗಿದೆ. 
ಸ್ಪಿನ್ ಬೌಲಿಂಗ್ ವಿಭಾಗದ ಜವಾಬ್ದಾರಿ ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ಅನುಭವಿ ರವೀಂದ್ರ ಜಡೇಜಾ ಅವರ ಕೈಯಲ್ಲಿದೆ. ಮೂವರು ಸ್ಪಿನ್ನರ್‌ಗಳ ತ್ರಿವಳಿ ಯಾವುದೇ ತಂಡದ ಬ್ಯಾಟ್ಸ್‌ಮನ್‌ಗಳನ್ನು ತಡೆಯುವಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ಆದರೆ ದುಬೈನ ಪಿಚ್‌ಗಳನ್ನು ಪರಿಗಣಿಸಿದರೆ, 3 ಸ್ಪಿನ್ನರ್‌ಗಳ ಬದಲಿಗೆ, 2 ಸ್ಪಿನ್ನರ್‌ಗಳನ್ನು ಸಹ ಆಡಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಜೊತೆಗೆ, ಅರ್ಶ್ದೀಪ್ ಸಿಂಗ್, ಹರ್ಷಿತ್ ರಾಣಾ ಕೂಡ ಆಡುವ 11ರಲ್ಲಿ ಸ್ಥಾನ ಪಡೆಯಬಹುದು. 
ಚಾಂಪಿಯನ್‌ ಟ್ರೋಫಿಗೆ ಭಾರತದ ಸಂಭಾವ್ಯ ಆಡುವ 11ರ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಮತ್ತು ಅರ್ಷದೀಪ್ ಸಿಂಗ್.