ಬೆಳಗಾವಿ: ಬೆಳಗಾವಿಯ ಪೊಲೀಸ್ ಠಾಣೆ ವ್ಯಾಪ್ತಿಯೊಂದರಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಪೊಲೀಸರು ಹೋಮ-ಹವನದ ಮೊರೆ ಹೋಗಿದ್ದಾರೆ. ಠಾಣೆಯ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಎಂದು ಈ ಹೋಮ ಹವನ ಮಾಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಬೆಳಗಾವಿ ನಗರದ ಶಿವ ಬಸವನಗರದಲ್ಲಿ ಇರುವ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿ ಸಾಲು ಸಾಲು ಅಪರಾಧ ಪ್ರಕರಣಗಳು ಠಾಣೆಗೆ ಬರುತ್ತಿದ್ದಂತೆ ಪೊಲೀಸರು ಈ ಪೂಜೆ ಮಾಡಿಸಿದ್ದಾರೆ. ಮಾಳಮಾರುತಿ ಸಿಪಿಐ ಜೆಎಂ ಕಾಲಿಮಿರ್ಜಿ ನೇತೃತ್ವದಲ್ಲಿ ಪೂಜೆ ನಡೆದಿದೆ ಎನ್ನಲಾಗಿದೆ. ಠಾಣೆಯಲ್ಲಿ ಪೂಜೆ ಮಾಡಿದ್ದ ಒಂದು ಪೋಟೋದಲ್ಲಿ ತೆಂಗಿನ ಕಾಯಿ, ಕುಂಕುಮ, ಭಂಡಾರ, ಬಾಳೆ ಹಣ್ಣುಗಳು, ಕರ್ಪೂರ, ಸ್ವೀಟ್ಸ್, ಅರಿಶಿಣ ಕೊಂಬು, ಅಡಿಕೆ, ಎಲೆಗಳು ಸೇರಿ ಇತರೆ ವಸ್ತುಗಳು ಇರುವುದು ಕಂಡು ಬಂದಿದೆ.