ಕೊಪ್ಪಳ: ಮಳೆಯಿಂದ ಈಗಾಗಲೆ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಪ್ರವಾಹದಿಂದ ಅದೇಷ್ಟೋ ಜನ ತಮ್ಮ ಮನೆ, ಆಸ್ತಿಗಳನ್ನ ಕಳೆದು ಕೊಂಡಿದ್ದಾರೆ. ಈಗ ಮತ್ತೊಂದು ಮುಂದೆ ಸಂಭವಿಸಬಹುದಾದ ಅನಾಹುತದ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ.
‘ತುಂಗಭದ್ರಾ ಜಲಾಶಯದ ಆಯಸ್ಸು ಕ್ಷೀಣಿಸಿದೆ’
19ನೇ ಕ್ರಸ್ಟ್ ಗೇಟ್ ಮುರಿದು ಬಿದ್ದಿದೆ. ಹಾಗಾಗಿ ಇದರಿಂದ ದೊಡ್ಡ ಅನಾಹುತವಾಗುವ ಮುನ್ನ ಕ್ರಮಕೈಗೊಳ್ಳಿ ಎಂದು ಜಲತಜ್ಞರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
1948ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಿ 1954ರಲ್ಲಿ ಲೋಕಾರ್ಪಣೆಗೊಂಡ ತುಂಗಭದ್ರಾ ಜಲಾಶಯಕ್ಕೆ ಈಗ 70 ವರ್ಷ. ನಿರ್ಮಾಣ ಮಾಡಿದವರೇ ಅದರ ಆಯಸ್ಸು 100 ವರ್ಷ ಎಂದು ಹೇಳಿದ್ದಾರೆ. ಹೀಗಾಗಿ, ಅದನ್ನು ದುರಸ್ತಿ ಮಾಡುವ ಅಥವಾ ಅದಕ್ಕೆ ಪರ್ಯಾಯ ಜಲಾಶಯ ನಿರ್ಮಾಣ ಮಾಡುವ ಯೋಜನೆ ರೂಪಿಸಲು ಇದು ಸಕಾಲ. ಹಾಗೆ ನೋಡಿದರೆ
ಜಲಾಶಯಕ್ಕೆ 50 ವರ್ಷವಾದಗಲೇ ಕ್ರಸ್ಟ್ ಗೇಟ್ ಬದಲಾಯಿಸಬೇಕಿತ್ತು. ಹಾಗೆ ಮಾಡದ್ದರಿಂದಲೇ 19ನೇ ಕ್ರಸ್ಟ್ ಗೇಟ್ ಕಳಚಿ ಹೋಗಿದೆ ಎಂದು ಜಲಾಶಯ ತಜ್ಞ ಕನ್ಹಯ್ಯ ನಾಯ್ಡು ಹೇಳಿದ್ದಾರೆ. ಅಷ್ಟೇ ಅಲ್ಲದೇ ಇನ್ನು 30 ವರ್ಷ ಜಲಾಶಯಕ್ಕೇನು ದೊಡ್ಡ ಅವಧಿಯಲ್ಲ. ಆದ್ದರಿಂದ ಈಗಿನಿಂದಲೇ ಪರ್ಯಾಯ ಯೋಜನೆ ರೂಪಿಸಬೇಕು ಎಂದಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಬರೋಬ್ಬರಿ 13 ಲಕ್ಷ ಎಕರೆ ನೀರಾವರಿಗೆ ಟಿಬಿ ಡ್ಯಾಂ ನೀರು ಒದಗಿಸುತ್ತದೆ. ದೇಶ-ವಿದೇಶಗಳಿಗೆ ಅಕ್ಕಿ ರಫ್ತು ಮಾಡುವುದರಿಂದ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ಆದಾಯವನ್ನು ಈ ಡ್ಯಾಂ ನೀಡುತ್ತದೆ. ಇಂಥ ಜಲಾಶಯದ ಗೇಟ್ ದುರಸ್ತಿ ಮಾಡಿ ಕೈತೊಳೆದುಕೊಳ್ಳುವ ಬದಲು ಶಾಶ್ವತ, ಪರ್ಯಾಯ ಯೋಜನೆ ರೂಪಿಸುವ ಅವಶ್ಯಕತೆ ಇದೆ, ಈ ವರ್ಷದ ಬೇಸಿಗೆಯಲ್ಲಿ ಸಂಪೂರ್ಣ ದುರಸ್ತಿಗೆ ಮುಂದಾಗಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.
ಕನ್ಹಯ್ಯ ನಾಯ್ಡು ನೀಡಿದ ಸಲಹೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಕ್ರಸ್ಟ್ ಗೇಟ್ ದುರಸ್ತಿ ಮಾಡಿದ ತಕ್ಷಣ ಮುಂದಿನ ಯೋಜನೆ ರೂಪಿಸಲು ಬೋರ್ಡ್ ಜತೆಗೆ ಮಾತುಕತೆ ನಡೆಸುತ್ತೇವೆ. ಇನ್ನೆಂದೂ ಇಂಥ ಅನಾಹುತ ಮರುಕಳಿಸದಂತೆ ಕ್ರಮವಹಿಸುತ್ತೇವೆ ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ ಶಿವರಾಜ ತಂಗಡಗಿ ತಿಳಿಸಸಿದ್ದಾರೆ.