ಟೀ-ಕಾಫಿ ಜೊತೆಗೆ ಏನಾದರು ತಿನ್ನುವ ಅಭ್ಯಾಸವಿರುತ್ತದೆ. ಅದರಲ್ಲು ಮಕ್ಕಳಿಗೆ ಸಂಜೆ ಕರಿದ ತಿಂಡಿ ಕೊಟ್ಟರೆ ಬಹಳ ಇಷ್ಟ. ಆದರೆ ಪ್ರತಿ ದಿನ ಕರಿದ ತಿಂಡಿ ಹಾಗೂ ಬೇಕರಿಯಿಂದ ತಂದು ತಿನ್ನುವುದು ಒಳ್ಳೆಯದಲ್ಲ. ಹೀಗಾಗಿ ಇವತ್ತು ನಾವು ಮನೆಯಲ್ಲಿಯೇ ಶುದ್ಧವಾಗಿ ಎಲ್ಲರ ಫೆವರೆಟ್ ಫ್ರೆಂಚ್ಫ್ರೈಸ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿಸುತ್ತೆವೆ.
ಫ್ರೆಂಚ್ ಫ್ರೈಸ್ ಮಾಡಲು ಬೇಕಾಗುವ ಪದಾರ್ಥಗಳು
ಆಲೂಗಡ್ಡೆ- 2 ಖಾರದ ಪುಡಿ - 1/2 ಟೀಸ್ಪೂನ್ ಅರಿಶಿನ ಪುಡಿ - 1/2 ಟೀಸ್ಪೂನ್ ಗರಂ ಮಸಾಲಾ - 1/2 ಟೀಸ್ಪೂನ್ ಕೊತ್ತಂಬರಿ ಪುಡಿ - 1/2 ಟೀಸ್ಪೂನ್ ಅಕ್ಕಿ ಹಿಟ್ಟು - 1 ಟೀಸ್ಪೂನ್ ಕಾನ್‌ಫ್ಲೋರ್ - 1 tbsp ರುಚಿಗೆ ಉಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು, ಎಣ್ಣೆ
ಫ್ರೆಂಚ್ ಫ್ರೈಸ್ ಮಾಡುವುದು ಹೇಗೆ?
ಎರಡು ಆಲೂಗಡ್ಡೆ ಸಿಪ್ಪೆ ತೆಗೆದು ಒಂದು ಬೌಲ್ನಲ್ಲಿ ನೀರು ಹಾಕಿ ಅದರೊಳಗೆ ಇಡಬೇಕು. 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ನೇರ ಕಡ್ಡಿಯ ಆಕಾರದಲ್ಲಿ ಸಣ್ಣದಾಗಿ ಒಂದೇ ರೀತಿ ಎರಡೂ ಆಲೂಗಡ್ಡೆಯನ್ನ ಕತ್ತರಿಸಿಕೊಳ್ಳಿ. ಬಳಿಕ ಅದನ್ನು ನೀರಿಗೆ ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ತೊಳೆದಿರುವ ಆಲೂಗಡ್ಡೆಯಿಂದ ನೀರು ತೆಗೆಯಬೇಕು. ಅದನ್ನು ಒಂದು ಬಟ್ಟೆಯ ಮೇಲೆ ಹಾಕಿ ಚೆನ್ನಾಗಿ ಒತ್ತಿಕೊಂಡು ಡ್ರೈ ಮಾಡಿಕೊಳ್ಳಿ, ಸಮಯವಿದ್ದರೆ ಅದನ್ನು ಫ್ಯಾನ್ ಗಾಳಿಗೆ ಹಿಡಿದು ಒಣಗಿಸಿ.
ನಂತರ ಕಟ್ ಮಾಡಿದ ಆಲೂಗಡ್ಡೆಯನ್ನು ಒಂದು ಬೌಲ್ಗೆ ಹಾಕಿ, ಬೌಲ್‌ಗೆ ಹಾಕಿದ ಆಲೂಗಡ್ಡೆಗೆ ಈಗ ಖಾರದ ಪುಡಿ, ಗರಂ ಮಸಾಲೆ, ಉಪ್ಪು, ಅರಶಿನ, ಧನಿಯಾ, ಚಾಟ್ ಮಸಾಲೆ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು( ಇವೆರೆಡು ಬೇಕಾದರೆ ಸ್ವಲ್ಪ ಹಾಕಿ), ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಆಲೂಗಡ್ಡೆಗೆ ಈ ಎಲ್ಲಾ ಮಸಾಲೆ ಹಿಡಿಯಬೇಕು ಹಾಗಾಗಿ ಮಿಕ್ಸ್ ಮಾಡಿ 5 ನಿಮಿಷ ಪಕ್ಕಕ್ಕೆ ಇಡಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಮಸಾಲೆ ಹಚ್ಚಿ ಇಟ್ಟಿರುವ ಆಲೂಗಡ್ಡೆಯನ್ನು ಒಂದೊಂದಾಗಿ ಬಿಡಿ. ಚೆನ್ನಾಗಿ ತಿರುಗಿಸುತ್ತಾ ಇರಿ. ಆಲೂಗಡ್ಡೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಗರಿ ಗರಿಯ ಫ್ರೆಂಚ್ ಫ್ರೈಸ್ ರೆಡಿಯಾಗುತ್ತದೆ.