ಹಾಸನ: ನಾನು ಸಿದ್ದರಾಮಯ್ಯನವರ ಜೊತೆ ಬಂಡೆಯಾಗಿ ಇರ್ತೇನೆ. ಸಾಯೋವರೆಗೆ ಸಿದ್ದರಾಮಯ್ಯ ಜೊತೆಗೆ ಇರುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಹಾಸನದಲ್ಲಿ ನಡೆದ ಜನಕಲ್ಯಾಣ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಡಿಸಿಎಂ ಡಿಕೆಶಿ, ಇದು ಕೇವಲ ಜನಕಲ್ಯಾಣ ಸಮಾವೇಶ ಮಾತ್ರ ಅಲ್ಲ. ಇದು ಗ್ಯಾರಂಟಿಗಳ, ಗೆಲುವಿನ, ನಂಬಿಕೆಯ ಸಮಾವೇಶ. ಬಿಜೆಪಿಯ ಕುತಂತ್ರಕ್ಕೆ ಜನರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಮೂರು ಉಪ ಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿದ್ದಾರೆ. ನಾವು ಯಾವತ್ತೂ ಭಾವನೆ, ಧರ್ಮದ ಮೇಲೆ ರಾಜಕಾರಣ ಮಾಡಲ್ಲ. ಬದುಕಿನ ಮೇಲೆ ರಾಜಕಾರಣ ಮಾಡ್ತೀವಿ. ನಾವು ಮಾಡುತ್ತಿರುವ ಈ ಅಧಿಕಾರ ನಶ್ವರ, ಕಾಂಗ್ರೆಸ್ ಪಕ್ಷದ ಸಾಧನೆ, ನಮ್ಮ ಸಾಧನೆ ಎಂದಿಗೂ ಅಜರಾಮರ ಎಂದು ಕಾಂಗ್ರೆಸ್ ಪಕ್ಷದ ಸಾಧನೆಗಳನ್ನ ಹಾಡಿ ಹೊಗಳಿದರು.
ʻಕಮಲ ಕೆರೆಯಲ್ಲಿದ್ದರೆ ಚನ್ನ, ತೆನೆ ಹೊಲದಲ್ಲಿದ್ದರೆ ಚೆಂದ, ಈ ದಾನ, ಧರ್ಮ ಮಾಡುವ ʻಕೈʼ ಅಧಿಕಾರದಲ್ಲಿದ್ದರೆ ಚೆಂದ, ಕಾಂಗ್ರೆಸ್ ಅಧಿಕಾರದಲ್ಲಿ ಇರಬೇಕು. ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಮುಂದಿನ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ. ಕುಮಾರಸ್ವಾಮಿ, ದೇವೇಗೌಡರು ಚನ್ನಪಟ್ಟಣ ಚುನಾವಣೆ ಸಂದರ್ಭ ಕಣ್ಣೀರು ಹಾಕಿದ್ರಿ, ಈ ರಾಜ್ಯಕ್ಕೆ, ಈ ಜಿಲ್ಲೆಗೆ ನಿಮ್ಮ ಸಾಧನೆಗೆ ಸಾಕ್ಷಿ ಏನು ಹೇಳಿ ಎಂದು ಪ್ರಶ್ನೆ ಮಾಡಿದರು.
ನಮ್ಮಲ್ಲಿದೆ ಒಗ್ಗಟ್ಟು, ಬಿಜೆಪಿ-ಜೆಡಿಎಸ್‌ನಲ್ಲಿದೆ ಬಿಕ್ಕಟ್ಟು
ತಾತ ಪ್ರಧಾನ ಮಂತ್ರಿ ಆಗಿದ್ರು, ತಂದೆ ಮುಖ್ಯಮಂತ್ರಿ ಆಗಿದ್ದರು, ಮಗನನ್ನ ಶಾಸಕನನ್ನಾಗಿ ಮಾಡೋಕೆ ನೋಡಿದ್ರು. ಆದ್ರೆ ನಿಮ್ಮ ಕ್ಷೇತ್ರ ಚನ್ನಪಟ್ಟಣದಲ್ಲೇ ಜನ ಒಪ್ಪಲಿಲ್ಲ. ಈ ರಾಜ್ಯದ ಜನರೂ ಒಪ್ಪಲ್ಲ. ಕುಮಾರಸ್ವಾಮಿ, ದೇವೇಗೌಡ ಈ ಸರ್ಕಾರವನ್ನ ಕಿತ್ತಾಕ್ತೀವಿ ಅಂದ್ರು. ದೇವೇಗೌಡರೇ ಇದೇನು ಹಾಸನದಲ್ಲಿ ಬೆಳೆಯುವ ಆಲೂಗಡ್ಡೆಯಲ್ಲ, ಕಡಲೇ ಕಾಯಿ ಗಿಡ ಅಲ್ಲ. 138 ಶಾಸಕರ ಜನ ಬೆಂಬಲದ ಸರ್ಕಾರ. ನಮ್ಮಲ್ಲಿದೆ ಒಗ್ಗಟ್ಟು, ಬಿಜೆಪಿ-ನಿಮ್ಮಲಿದೆ ಬಿಕ್ಕಟ್ಟು ಎಂದು ಲೇವಡಿ ಮಾಡಿದರು.