ಮೈಸೂರು : ಗ್ಯಾರಂಟಿ ಯೋಜನೆ ಘೋಷಿಸಿದ್ದಾಗ ಮೋದಿ, ಬಿಜೆಪಿ, ಜೆಡಿಎಸ್ ನವರು ವಿರೋಧ ಮಾಡಿದ್ದರು. ಗ್ಯಾರಂಟಿ ಯೋಜನೆ ಮಾಡಿದ್ದರು ಕರ್ನಾಟಕ ದಿವಾಳಿ ಆಗಲಿಲ್ಲ. ಲೋಕಸಭಾ ಚುನಾವಣೆ ಆದ ಮೇಲೆ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ ಎಂದು ಬಿಜೆಪಿ ಸುಳ್ಳು ಹೇಳಿತು. ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ-ಸೊಸೆ ನಡುವೆ ಜಗಳ ತಂದಿಟ್ಟರು ಎಂದು ಸುಳ್ಳು ಹೇಳಿದರು. ಈ ಸಿದ್ದರಾಮಯ್ಯ ಬಡವರಿಗೆ ಅನ್ಯಾಯ ಮಾಡಿದ್ದಿನಾ ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಕಳೆದ 42 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನಿಮ್ಮಿಂದ ಒಂದು ರೂಪಾಯಿ ಲಂಚ ಪಡೆದಿದ್ದನಾ? ಸಿದ್ದರಾಮಯ್ಯ ಮೇಲೆ ಮಾಡುತ್ತಿರುವ ಆರೋಪ ನೀವು ಸಹಿಸಿ ಕೊಳ್ತಿರಾ? ನನ್ನ ಜೀವನ ತೆರೆದ ಪುಸ್ತಕ. ಮೂಡಾ ಪ್ರಕರಣ ಎಂದು ಹೇಳುತ್ತಾರೆ. ನನ್ನ ಭಾಮೈದ ತೆಗೆದುಕೊಂಡು ಜಮೀನನ್ನ ತನ್ನ ತಂಗಿಗೆ ಕೊಟ್ಟಿದ್ದಾನೆ. ಅದಕ್ಕೆ ಸೈಟ್ ಬಂದಿದ್ದವು. ಅದನ್ನೆ ದೊಡ್ಡ ವಿವಾದ ಮಾಡಿದರು. ಅದಕ್ಕೆ ಬೇಡವೆ ಬೇಡ ಅಂತಾ ವಾಪಸ್ ಕೊಟ್ಟೆವು. ಒಬ್ಬ ಸಿಎಂ ಆಗಿ ನಾನು ಈಗ ಮೈಸೂರಿನಲ್ಲಿ ಮನೆ ಕಟ್ಟುತ್ತಿದ್ದೇನೆ. 40 ವರ್ಷದಿಂದ ಸ್ವಂತ ಮನೆ ಇಲ್ಲ ನನಗೆ. ನಾನು ಈಗ ಇರುವ ಮನೆ ಮರಿಸ್ವಾಮಿ ಎಂಬುವವರದು. ಒಬ್ಬ ಸಿಎಂ ಆದವನು ಬಾಡಿಗೆ ಮನೆಯಲ್ಲಿ ಇದ್ದೇನೆ. ನೀವೇ ನನ್ನ ಮಾಲೀಕರು, ನೀವೇ ನನ್ನ ಯಜಮಾನರು ಅದಕ್ಕೆ ಇದನ್ನು ಹೇಳ್ತಿದ್ದೇನೆ. ಮೂರು ವರ್ಷದಿಂದ ಮನೆ ಕಟ್ಟಿಸುತ್ತಿದ್ದೇನೆ. ಅದು ಇನ್ನೂ ಮುಗಿದಿಲ್ಲ ಎಂದರು.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಆಗುತ್ತಿದೆ. ವರ್ಚಸ್ಸು ಕುಗ್ಗಿಸುವ ಕೆಲಸ ಆಗುತ್ತಿದೆ. ವರ್ಚಸ್ಸು ಕೊಡುವವರು ಜನರು. ನನಗೆ ನಿಮ್ಮ ಆಶೀರ್ವಾದ ಬೇಕು.
ನಾನು ಪ್ರಾಮಾಣಿಕವಾಗಿ ಕೆಲಸ ಮಾಡ್ತಿದ್ದೇನೆ. ನನ್ನ ಕಂಡರೆ ಕುಮಾರಸ್ವಾಮಿ, ಯಡಿಯೂರಪ್ಪ, ಅಶೋಕ್, ವಿಜೇಯೇಂದ್ರ, ಪ್ರಹ್ಲಾದ್ ಜೋಶಿ ಗೆ ಹೊಟ್ಟೆ ಉರಿ. ನಾನು ಯಾವುದೇ ಕಾರಣಕ್ಕೂ ಧೃತಿಗೇಡಲ್ಲ. ಜನರ ಆಶೀರ್ವಾದ ಇರುವವರೆಗೂ ಬಿಜೆಪಿ, ಜೆಡಿಎಸ್ ಅನ್ನು ಈ ಸಿದ್ದರಾಮಯ್ಯ ಎದುರಿಸುತ್ತಾನೆ. ನಾನು ಯಾರಿಗೂ ಜಗ್ಗಲ್ಲ, ಬಗ್ಗಲ್ಲ. ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತದೆ. ಕಾನೂನು, ನ್ಯಾಯಾಲಯ ಮೇಲೆ ಗೌರವ ಇದೆ. ನ್ಯಾಯ ಸಿಗುತ್ತದೆ. ನಾನು ಎಲ್ಲಿಯವರೆಗೆ ಇರುತ್ತೇನೋ ಅಲ್ಲಿಯವರೆಗೂ ಬಡವರ ಪರ ಇರುತ್ತೇನೆ. ಸಾಮಾಜಿಕ ನ್ಯಾಯದ ಪರ ಕೆಲಸ ಮಾಡ್ತಿನಿ. ನಿಮಗೆ ಗೌರವ ತಂದು ಕೊಡುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಾನೆ ಹೊರತು ಅಗೌರವ ತಂದು ಕೊಡುವ ಕೆಲಸ ಮಾಡಲ್ಲ ಎಂದು ಹೇಳಿದ್ದಾರೆ.