ದುಬೈ: ಚಾಂಪಿಯನ್ಸ್ ಟ್ರೋಫಿ ಆಯೋಜಿಸುವ ಕುರಿತು ಭಾರತ ಮತ್ತು ಪಾಕಿಸ್ಥಾನ ನಡುವೆ ಉಂಟಾಗಿರುವ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ಕರೆಯಲಾಗಿದ್ದ ಸಭೆಯನ್ನು ಐಸಿಸಿ ಮುಂದೂಡಿದೆ.
ಮುಂದಿನ ವರ್ಷದ ಫೆಬ್ರವರಿಯಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಬೇಕಿದೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡ ಪಾಕ್‌ಗೆ ತೆರಳುವುದಿಲ್ಲ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಟೂರ್ನಿ ಆಯೋಜನೆ ಕುರಿತು ಗೊಂದಲ ಏರ್ಪಟ್ಟಿದೆ. ಟೂರ್ನಿ ಆಯೋಜನೆ ಕುರಿತು ನಿರ್ಧಾರ ತೆಗೆದುಕೊಳ್ಳಲು ಐಸಿಸಿ ಇಂದು ಸಭೆ ಕರೆದಿತ್ತು
ಸಭೆಯಲ್ಲಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕೆ..? ಅಥವಾ ಇಡೀ ಟೂರ್ನಿಯನ್ನು ಪಾಕಿಸ್ತಾನದಲ್ಲೇ ಆಯೋಜಿಸಬೇಕೆ ಅನ್ನೋ ಬಗ್ಗೆ ಚರ್ಚೆ ನಡೆದಿದೆ. ಮೂಲಗಳ ಪ್ರಕಾರ 10 ರಿಂದ 15 ನಿಮಿಷಗಳವರೆಗೆ ನಡೆದ ಈ ಸಭೆಯಲ್ಲಿ ಅಂತಿಮವಾಗಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಈ ಸಭೆಯನ್ನು ನವೆಂಬರ್ 30 ಕ್ಕೆ ಅಂದರೆ ನಾಳೆಗೆ ಮುಂದೂಡಲಾಗಿದೆ. ಈಗ ಈ ಟೂರ್ನಿಯ ಅಂತಿಮ ನಿರ್ಧಾರ ನವೆಂಬರ್ 30 ರಂದು ಹೊರಬೀಳಬಹುದು ಎಂದು ನಿರೀಕ್ಷಿಸಲಾಗಿದೆ.
ಐಸಿಸಿಯ ಈ ಸಭೆಯಲ್ಲಿ ಟೂರ್ನಿಯ ಆತಿಥ್ಯಕ್ಕೆ ಸಂಬಂಧಿಸಿದಂತೆ ಮೂರು ಆಯ್ಕೆಗಳನ್ನು ಇಟ್ಟುಕೊಂಡು ಚರ್ಚೆ ನಡೆಸಲಾಗಿದೆ. ಮೊದಲ ಆಯ್ಕೆಯಾಗಿ, ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವುದು. ಆ ಪ್ರಕಾರ, ಟೀಂ ಇಂಡಿಯಾದ ಪಂದ್ಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳನ್ನು ಪಾಕಿಸ್ತಾನದಲ್ಲೇ ನಡೆಸುವುದು. ಎರಡನೆಯ ಆಯ್ಕೆಯೆಂದರೆ, ಇಡೀ ಪಂದ್ಯಾವಳಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದ ಹೊರಗೆ ನಡೆಸುವುದು. ಆದರೆ ಪಂದ್ಯಾವಳಿಯ ಹೋಸ್ಟಿಂಗ್ ಹಕ್ಕುಗಳನ್ನು ಪಿಸಿಬಿಗೆ ನೀಡುವುದು. ಕೊನೆಯ ಆಯ್ಕೆಯೆಂದರೆ ಟೀಂ ಇಂಡಿಯಾವನ್ನು ಹೊರಗಿಟ್ಟು ಸಂಪೂರ್ಣ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲೇ ನಡೆಸುವುದು. ಆದರೆ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ಪಾಕಿಸ್ತಾನ ಈ ಟೂರ್ನಿಗಾಗಿ ಸಾಕಷ್ಟು ಸಿದ‍್ಧತೆ ನಡೆಸುತ್ತಿದೆ, ಮೂರು ಸ್ಟೇಡಿಯಂಗಳನ್ನು ನವೀಕರಿಸುತ್ತಿದೆ. ಹಾಗಾಗಿ ಟೂರ್ನಿ ಪಾಕ್‌ನಿಂದ ಹೊರಗೆ ನಡೆದರೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ನಷ್ಟವಾಗಲಿದೆ. ಇನ್ನು ಭಾರತವನ್ನು ಹೊರಗಿಟ್ಟು ಟೂರ್ನಿ ನಡೆಸಲು ಐಸಿಸಿ ಸಿದ್ಧವಿಲ್ಲ. ಹಾಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಯಾವ ವಿಧದ ಒಪ್ಪಂದಕ್ಕೆ ಬರಲಾಗುತ್ತೆ ಅನ್ನೋ ಕುತೂಹಲ ಕ್ರಿಕೆಟ್ ಅಭಿಮಾನಿಗಳದ್ದು.