ಮುಂಬೈ: ಇತ್ತೀಚೆಗೆ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಯುವ ಆಟಗಾರ ಉರ್ವಿಲ್ ಪಟೇಲ್ ಟಿ20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆದಿದಾರೆ.
ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದಿದ್ದ ಐಪಿಎಲ್ 2025 ಮೆಗಾ ಹರಾಜಿನಲ್ಲಿ ಉರ್ವಿಲ್ ಪಟೇಲ್ ಅನ್‌ಸೋಲ್ಡ್ ಆಗಿದ್ದರು. ಅನ್‌ಸೋಲ್ಡ್ ಆದ ಬಳಿಕ ಉರ್ವಿಲ್ ಪಟೇಲ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತು ಪಡಿಸಿದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗುಜರಾತ್ ತಮಡದ ಪರ ಆಡುತ್ತಿರುವ ಉರ್ವಿಲ್ ಪಟೇಲ್ ಇತ್ತೀಚೆಗೆ ತ್ರಿಪುರಾ ವಿರುದ್ಧ 28 ಎಸೆತದಲ್ಲಿ ಶತಕ ಬಾರಿಸಿದ್ದರು. ಈ ಶತಕದ ಬೆನ್ನಲ್ಲೇ ಉತ್ತರಾಖಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿದಾರೆ. ಈ ಮೂಲಕ 40 ಎಸೆತಗಳಿಗಿಂತ ಕಡಿಮೆ ಎಸೆತದಲ್ಲಿ 2 ಶತಕ ಗಳಿಸಿದ ವಿಶ್ವದಾಖಲೆ ಬರೆದಿದಾರೆ.
2024ರ ಸೀಸನ್ ನಲ್ಲಿ ಗುಜರಾತ್ ಟೈಟನ್ಸ್ ನಲ್ಲಿ ಆಡಿದ್ದ ಉರ್ವಿಲ್ ಪಟೇಲ್ ರನ್ನು ಖರೀದಿಸಲು ಈ ಬಾರಿ ಯಾವುದೇ ತಂಡ ಆಸಕ್ತಿ ತೋರಿರಲಿಲ್ಲ. ಹಾಗಾಗಿ ಅನ್‌ಸೋಲ್ಡ್ ಆಗಿದ್ದ ಉರ್ವಿಲ್ ಪಟೇಲ್‌ಗೆ ಐಪಿಎಲ್ ಬಾಗಿಲು ಮುಚ್ಚಿತ್ತು. ಆದರೆ ಇದರಿಂದ ನಿರಾಶರಾಗದ ಉರ್ವಿಲ್ ದೇಶೀಯ ಕ್ರಿಕೆಟ್ ನಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.
ಇನ್ನು ಉರ್ವಿಲ್ ಪಟೇಲ್ ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಕೇವಲ 35 ಎಸೆತದಲ್ಲಿ 12 ಸಿಕ್ಸರ್ 7 ಬೌಂಡರಿಗಳೊಂದಿಗೆ 113 ರನ್ ಗಳಿಸಿದ್ದರು. ಉತ್ತರಾಖಂಡದ ವಿರುದ್ಧದ ಪಂದ್ಯದಲ್ಲಿ 41 ಎಸೆತದಲ್ಲಿ 11 ಸಿಕ್ಸರ್ ಮತ್ತು 8 ಬೌಂಡರಿಗಳೊಂದಿಗೆ 115 ರನ್ ಗಳಿಸಿದ್ದರು. ಇನ್ನು ಟೂರ್ನಿಯಲ್ಲಿ ಇದುವರೆಗೆ 5 ಪಂದ್ಯಗಳಲ್ಲಿ 282 ರನ್ ಕಲೆ ಹಾಕಿದಾರೆ.
ಉರ್ವಿಲ್ ಪಟೇಲ್ ದಾಖಲೆಯ ಆಟದಿಂದಾಗಿ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದಾರೆ. ಆದರೆ ಉರ್ವಿಲ್ ಗೆ ಈಗಲೂ ಐಪಿಎಲ್ ನಲ್ಲಿ ಆಡುವ ಅವಕಾಶವಿದೆ. ಐಪಿಎಲ್ ನಿಯಮದಂತೆ ಐಪಿಎಲ್ನ 10 ಫ್ರಾಂಚೈಸಿಗಳ ಯಾವುದೇ ಆಟಗಾರ ಗಾಯಗೊಂಡರೆ, ಅವರ ಬದಲಿಗೆ ಉರ್ವಿಲ್ ಅವರನ್ನು ಫ್ರಾಂಚೈಸಿ ತಮ್ಮ ತಂಡಕ್ಕೆ ಆಯ್ಕೆ ಮಾಡಬಹುದು. ಇಂತಹ ಸಂದರ್ಭದಲ್ಲಿ ಅವರು ಐಪಿಎಲ್ 2025ರ ಟೂರ್ನಿಯನ್ನು ಆಡಬಹುದಾಗಿದೆ.