ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಲು ಕಳ್ಳರ ಹಾವಳಿ ಹೆಚ್ಚಾಗಿದೆ. ನಗರದ ಕನಕಪುರ ರಸ್ತೆ ಕಲ್ಲಸಂದ್ರದಲ್ಲಿ ಈ ಹಾಲು ಕಳ್ಳತನ ಕೃತ್ಯ ನಡೆಯುತ್ತಿದ್ದು, ಹಾಲು ಕಳ್ಳರ ಹಾವಳಿಗೆ ಬಡ ಹಾಲು ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಅವರ ಹಾಲು ಕದ್ದು ತಮ್ಮ ಹೊಟ್ಟೆ ತುಂಬಿಸಿಕೊಳ್ತಿರೋ ಈ ಕಳ್ಳರ ಕೈ ಚಳಕದ ಬಗ್ಗೆ ಸುಬ್ರಮ್ಮಣ್ಯಪುರ ಪೊಲೀಸರಿಗೆ ದೂರು ಕೊಟ್ರೆ ಕ್ಯಾರೆ ಅನ್ನುತ್ತಿಲ್ಲವಂತೆ. ದೂರು ಕೊಟ್ರು ಎಫ್ಐಆರ್ ದಾಖಲಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರಂತೆ.
ಬೆಳಗ್ಗಿನ ಜಾವ ಸುಮಾರು 4 ಗಂಟೆ ಸುಮಾರಿಗೆ ಹಾಲಿನ ಬೂತ್ ಗಳಿಗೆ ಕ್ರೇಟ್ ನಲ್ಲಿ ಹಾಲನ್ನ ಅನ್ ಲೋಡ್ ಮಾಡಲಾಗುತ್ತೆ. ಲಾರಿಯಲ್ಲಿ ಹಾಲಿನ ಪ್ಯಾಕೆಟ್ ಗಳನ್ನ ತಂದು ಅಂಗಡಿ ಮುಂದೆ ಇಳಿಸಿ ಹೋಗ್ತಾರೆ. ಆದ್ರೆ ಹಾಲಿನ ಬೂತ್ ಮಾಲೀಕರು ತಡವಾಗಿ ಬಂದು ನಂತರ ವ್ಯಾಪಾರ ಮಾಡ್ತಾರೆ.
ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಬೆಳ್ಳಂ ಬೆಳಗ್ಗೆ ಹಾಲು ಕದಿಯೋದನ್ನೇ ರೂಢಿಸಿಕೊಂಡಿದ್ದಾರೆ. ದಿಲೀಪ್ ಎಂಬುವವರ ಹಾಲಿನ ಬೂತ್ ಗೆ ಸ್ಕೂಟರ್ ನಲ್ಲಿ ಬಂದ ಇಬ್ಬರು ಖದೀಮರು ಕ್ರೇಟ್ ಗಟ್ಟಲೆ ಹಾಲನ್ನ ಕದ್ದು ಎಸ್ಕೇಪ್ ಆಗಿದ್ದಾರೆ. ಹೀಗೆ ಮೂರ್ನಾಲ್ಕು ಬಾರಿ ಅದೇ ಅಂಗಡಿಯಲ್ಲಿ ಖದೀಮರು ಕೈಚಳಕ ತೋರಿದ್ದಾರೆ. ಹಾಲಿನ ಬೂತ್ ಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಹಾಲು ಕಳ್ಳತನ ದೃಶ್ಯ ಸೆರೆಯಾಗಿದೆ. ಇದೇ ರೀತಿ ಸುಬ್ರಹ್ಮಣ್ಯ ಪುರದ ಹಲವು ಹಾಲಿನ ಬೂತ್ ನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.
ಹಾಲುಗಳ್ಳರಿಂದ ರೋಸಿ ಹೋದ ಹಾಲಿನ ಬೂತ್ ಮಾಲೀಕರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಆದ್ರೆ ಸುಬ್ರಹ್ಮಣ್ಯಪುರ ಪೊಲೀಸರು ಹಾಲು ಕಳ್ಳತನ ಸಣ್ಣ ಕೇಸ್ ಅಂತ ದೂರು ದಾಖಲಿಸದೆ ನಿರ್ಲಕ್ಷ್ಯ ತೋರಿದ್ದಾರೆ.