ದೇಶ

ಸಿರಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 75 ಭಾರತೀಯರ ರಕ್ಷಣೆ

ಸಿರಿಯಾದಲ್ಲಿ ಬಂಡುಕೋರರ ದಾಳಿಯಿಂದಾಗಿ ಅರಾಜಕತ ಸ್ಥಿತಿ ಸೃಷ್ಟಿಯಾಗಿದ್ದು, ಅಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 75 ಭಾರತೀಯರನ್ನು ಕೇಂದ್ರ ಸರ್ಕಾರ ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದೆ.

ನವದೆಹಲಿ: ಸಿರಿಯಾದಲ್ಲಿ ಬಂಡುಕೋರರ ದಾಳಿಯಿಂದಾಗಿ ಅರಾಜಕತ ಸ್ಥಿತಿ ಸೃಷ್ಟಿಯಾಗಿದ್ದು, ಅಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 75 ಭಾರತೀಯರನ್ನು ಕೇಂದ್ರ ಸರ್ಕಾರ ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದೆ.

ಸಿರಿಯಾದ ಡಮಾಸ್ಕಸ್‌ ಮತ್ತು ಲೆಬೆನಾನ್‌ನ ಬೈರುತ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಸಿರಿಯಾದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಂಡಿದ್ದವು. ಅದರಂತೆ ಬುಧವಾರ 75 ಭಾರತೀಯರನ್ನು ಸಿರಿಯಾದಿಂದ ಲೆಬನಾನ್‌ನ ಬೈರುತ್‌ಗೆ ಕರೆತರಲಾಗಿತ್ತು. ಅಲ್ಲಿಂದ ಭಾರತಕ್ಕೆ ಅವರನ್ನು ಕರೆತರಲಾಗಿದ್ದು, ಗುರುವಾರ ಬೆಳಗ್ಗೆ 75 ಭಾರತೀಯರು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ಸಿರಿಯಾದಲ್ಲಿ ಸಿಲುಕಿರುವ ಇನ್ನಷ್ಟು ಭಾರತೀಯರ ರಕ್ಷಣೆಗೆ ವಿದೇಶಾಂಗ ಸಚಿವಾಲಯ ಅಗತ್ಯ ಕ್ರಮ ತೆಗೆದುಕೊಂಡಿದೆ.

ಸಿರಿಯಾದಿಂದ ಸುರಕ್ಷಿತವಾಗಿ ವಾಪಸ್‌ ಬಂದ ರವಿ ಭೂಷಣ್‌ ಅವರು ಅಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ್ದು, ಸ್ಥಳೀಯರು ಎಕೆ 47 ರೈಫಲ್‌ ಹಿಡಿದು ರಸ್ತೆಗಳ ತುಂಬೆಲ್ಲಾ ಓಡಾಡುತ್ತಿದ್ದಾರೆ. ಅವರು ಸಿಕ್ಕ ಸಿಕ್ಕ ವಾಹನಗಳನ್ನು ಲೂಟಿ ಮಾಡುತ್ತಿದ್ದರು. ಹಲವೆಡೆ ಬಾಂಬ್‌ ಸ್ಟೋಟ ನಡೆದಿದ್ದರೆ, ಗುಂಡಿನ ಚಕಮಕಿಯೂ ನಡೆಯುತ್ತಿತ್ತು. ಭಾರತೀಯ ರಾಯಭಾರ ಕಚೇರಿ ನಿರಂತರವಾಗಿ ನಮ್ಮ ಸಂಪರ್ಕದಲ್ಲಿತ್ತು ಮತ್ತು ನಮ್ಮನ್ನು ಸುರಕ್ಷಿತವಾಗಿ ರಕ್ಷಿಸಿದೆ ಎಂದು ತಿಳಿಸಿದ್ದಾರೆ.