ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಬೆನ್ನಲ್ಲೇ ಈಗ ಭಾರತದ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಭಾರತದ ವಸ್ತುಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಬಟ್ಟೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಮಂಗಳವಾರ ರಾಜಶಾಹಿ ನಗರದಲ್ಲಿ ನಡೆದ ‘ಭಾರತೀಯ ಉತ್ಪನ್ನಗಳ ಬಹಿಷ್ಕಾರ’ ಕಾರ್ಯಕ್ರಮದಲ್ಲಿ ಬಿಎನ್ಪಿಯ ಹಿರಿಯ ಜಂಟಿ ಕಾರ್ಯದರ್ಶಿ ಅಡ್ವೊಕೇಟ್ ರುಹುಲ್ ಕಬೀರ್ ರಿಜ್ವಿ ರಾಜಸ್ಥಾನದ ಜೈಪುರದಲ್ಲಿ ತಯಾರಿಸಲಾದ ಬೆಡ್ಶೀಟ್ಗೆ ಬೆಂಕಿ ಹಚ್ಚಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ರಿಜ್ವಿ ಈ ಬೆಡ್ಶೀಟ್ ರಾಜಸ್ಥಾನದ ರಾಜಧಾನಿ ಜೈಪುರದಿಂದ ಬಂದಿದೆ. ನಾವು ಭಾರತದ ಆಕ್ರಮಣವನ್ನು ಪ್ರತಿಭಟಿಸಲು ಇದನ್ನು ಮಾಡುತ್ತಿದ್ದೇವೆ. ಬಾಂಗ್ಲಾದೇಶದ ಜನರಿಗೆ ಭಾರತದ ವಸ್ತುಗಳು ಸೂಕ್ತವಲ್ಲ ಎಂಬ ಕಾರಣಕ್ಕಾಗಿ ನಾವು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿದ್ದೇವೆ, ಅವರ ಸ್ನೇಹ ಶೇಖ್ ಹಸೀನಾ ಅವರೊಂದಿಗೆ ಮಾತ್ರ ಎಂದು ಬೆಡ್ಶೀಟ್ ಅನ್ನು ಬೀದಿಗೆ ಎಸೆದು ಅದನ್ನು ಸುಡುವಂತೆ ಪಕ್ಷದ ಸದಸ್ಯರಿಗೆ ಸೂಚಿಸಿದರು. ರಿಜ್ವಿ ಕಳೆದ ವಾರ ತಮ್ಮ ಪತ್ನಿಯ ಭಾರತ ನಿರ್ಮಿತ ಸೀರೆಯನ್ನು ಸುಟ್ಟು ಪ್ರತಿಭಟನೆ ನಡೆಸಿದ್ದರು.