ಕ್ರೀಡೆಗಳು

ಬಾಕ್ಸಿಂಗ್‌ ಡೇ ಟೆಸ್ಟ್‌… ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ

ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಭಾರತ ತಂಡ ಮೊದಲ ಇನಿಂಗ್ಸ್‌ ನಲ್ಲಿ ಕಡಿಮೆ ಮೊತ್ತಕ್ಕೆ ಆಲೌಟಾಗುವ ಆತಂಕ ಎದುರಾಗಿದೆ.

ಮೆಲ್ಬೋರ್ನ್‌: ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಭಾರತ ತಂಡ ಮೊದಲ ಇನಿಂಗ್ಸ್‌ ನಲ್ಲಿ ಕಡಿಮೆ ಮೊತ್ತಕ್ಕೆ ಆಲೌಟಾಗುವ ಆತಂಕ ಎದುರಾಗಿದೆ.

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಆಕರ್ಷಕ ಅರ್ಧಶತಕದ ಹೊರತಾಗಿಯೂ ಟೀಂ ಇಂಡಿಯಾ ಎರಡನೇ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ ನಲ್ಲಿ 46 ಓವರ್‌ ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿದೆ. ಟೀಂ ಇಂಡಿಯಾ ಪರ ಇನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮಾ ಕೇವಲ 3 ರನ್‌ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಕೆ.ಎಲ್‌. ರಾಹುಲ್‌ ಸಹ 24 ರನ್‌ ಗಳಿಸಿ ಔಟಾದರು. ಈ ಹಂತದಲ್ಲಿ  ಮೂರನೇ ವಿಕೆಟ್‌ಗೆ ಜೊತೆಯಾಗಿದ್ದ ಯಶಸ್ವಿ ಜೈಸ್ವಾಲ್‌ ಮತ್ತು ವಿರಾಟ್‌ ಕೊಹ್ಲಿ 102 ರನ್‌ಗಳ ಜೊತೆಯಾಟದ ಮೂಲಕ ಭಾರತ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದ್ದರು ಹಾಗೂ ದೊಡ್ಡ ಮೊತ್ತದ ಭರವಸೆಯನ್ನು ಮೂಡಿಸಿದ್ದರು. ಆದರೆ 118 ಎಸೆತಗಳಲ್ಲಿ 82 ರನ್‌ ಗಳಿಸಿದ್ದ ಯಶಸ್ವಿ ಜೈಸ್ವಾಲ್‌ ರನ್‌ಔಟ್‌ ಆದ ಬಳಿಕ ಪಂದ್ಯದ ದಿಕ್ಕು ಸಂಪೂರ್ಣ ಬದಲಾಯಿತು.

ಯಶಸ್ವಿ ಜೈಸ್ವಾಲ್ ಜತೆ‌ ಶತಕದ ಜತೆಯಾಟವಾಡಿದ್ದ ವಿರಾಟ್‌ ಕೊಹ್ಲಿ 36 ರನ್‌ ಗಳಿಸಿದ್ದಾಗ ಆಫ್‌ ಸ್ಟಂಪ್‌ನಿಂದ ಹೊರಗೆ ಹೋಗುತ್ತಿದ್ದ ಚೆಂಡನ್ನು ಕೆಣಕಲು ಹೋಗಿ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿ ಔಟಾದರು. ಇನ್ನು ನೈಟ್‌ ವಾಚ್‌ ಮನ್‌ ಆಗಿ ಕ್ರೀಸ್‌ಗೆ ಬಂದ ಆಕಾಶ್‌ದೀಪ್‌ ಸಹ ಶೂನ್ಯಕ್ಕೆ ಔಟಾದರು. 153 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದ ಭಾರತ ತಂಡ 6 ರನ್‌ ಅಂತರದಲ್ಲಿ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 6 ರನ್‌ ಗಳಿಸಿರುವ ರಿಷಭ್‌ ಪಂತ್‌ ಮತ್ತು 4 ರನ್‌ ಗಳಿಸಿರುವ ರವೀಂದ್ರ ಜಡೇಜಾ ಕ್ರೀಸ್‌ ನಲ್ಲಿದ್ದಾರೆ.

ಇನ್ನು ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 311 ರನ್‌ ಗಳಿಸಿದ್ದ ಆಸ್ಟ್ರೇಲಿಯಾ ತಂಡ ಸ್ಟೀವ್‌ ಸ್ಮಿತ್‌ ಗಳಿಸಿದ ಆಕರ್ಷಕ ಶತಕದ ನೆರವಿನಿಂದ 474 ರನ್‌ ಗಳಿಸಿ ಆಲೌಟಾಯಿತು. ಸ್ಟೀವನ್‌ ಸ್ಮಿತ್‌ 140 ರನ್‌ ಗಳಿಸಿ ಔಟಾದರು. ಎರಡನೇ ದಿನದಾಟದಂತ್ಯಕ್ಕೆ 310 ರನ್‌ ಮುನ್ನಡೆ ಹೊಂದಿರುವ ಆಸ್ಟ್ರೇಲಿಯಾ ತಂಡ ಬಾಕ್ಸಿಂಗ್‌ ಡೇ ಟೆಸ್ಟ್‌ ನಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ.