7 ವರ್ಷಗಳ ಬಳಿಕ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಇನ್ನು 2 ವಾರ ಮಾತ್ರ ಬಾಕಿಯಿದೆ. ಈ ಹೊತ್ತಿನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಎರಡೂ ತಂಡಗಳಿಗೆ ಮಹತ್ವದ್ದಾಗಿದ್ದರೂ, ಭಾರತದ ಪಾಲಿಗಂತೂ ಅಗ್ನಿಪರೀಕ್ಷೆ ಇದ್ದಂತೆ. ಚುಟುಕು ಕ್ರಿಕೆಟ್ ಬಳಿಕ ಇದೀಗ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇಂದು ನಾಗ್ಪುರದಲ್ಲಿ ಏಕದಿನ ಸರಣಿಯಯ ಪ್ರಥಮ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 1.30ಕ್ಕೆ ಸರಿಯಾಗಿ ಪ್ರಾರಂಭವಾಗಲಿದೆ. ಇಂಗ್ಲೆಂಡ್ ವಿರುದ್ಧದ T-20 ಸರಣಿಯಲ್ಲಿ 4-1ರಿಂದ ಗೆದ್ದಿರುವ ಟೀಂ ಇಂಡಿಯಾ, ಏಕದಿನ ಸರಣಿಯನ್ನೂ ಕೈವಶಪಡಿಸಿಕೊಳ್ಳುವ ಕಾತರದಲ್ಲಿದೆ. ಆದರೆ ಸರಣಿ ಜಯ ಜೊತೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ದೃಷ್ಟಿಯಿಂದ ಆಟಗಾರರ ಕಮ್‌ಬ್ಯಾಕ್, ಫಿಟ್ನೆಸ್ ಸಾಬೀತು ಕೂಡ ಬಹುಮುಖ್ಯವಾಗಿದೆ.