ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ. ಟಿಕೆಟ್‌ಗಾಗಿ ಕಾದು ನೋಡ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಪಾಕಿಸ್ತಾನ ಆತಿಥ್ಯ ವಹಿಸಿರುವ ಈ ಸರಣಿಯು ಪಾಕ್ ಮತ್ತು ದುಬೈನಲ್ಲಿ ನಡೆಯುವ ಹೈಬ್ರಿಡ್ ಸ್ವರೂಪದ ಸರಣಿಯಾಗಿದೆ. ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭಾರತ ಫೈನಲ್ ಪ್ರವೇಶಿಸಿದೆ ಈ ಪಂದ್ಯವನ್ನು ಕೂಡ ದುಬೈನಲ್ಲೇ ಆಡಲಿದೆ. ಭಾರತ ಫೈನಲ್ ತಲುಪದಿದ್ದರೆ ಲಾಹೋರ್‌ನಲ್ಲಿ ಫೈನಲ್ ನಡೆಯಲಿದೆ. ಫೆಬ್ರವರಿ 19ರಂದು ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ಆಡುವ ಮೂಲಕ ಸರಣಿಗೆ ಚಾಲನೆ ಸಿಗಲಿದೆ. ಫೆಬ್ರವರಿ 20ರಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ. ಫೆಬ್ರವರಿ 23ರಂದು ದುಬೈನಲ್ಲಿ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ಪಂದ್ಯ ನಡೆಯಲಿದೆ.