ಅಮೆರಿಕ ಮತ್ತು ಚೀನಾ ನಡುವಿನ AI ( ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಪ್ರಾಬಲ್ಯದ ಹಗ್ಗಜಗ್ಗಾಟದ ನಡುವೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಭಾರತವು ತನ್ನದೇ ಆದ AI ಮಾದರಿಯನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ. ಇನ್ನು 8-10 ತಿಂಗಳಲ್ಲಿ ಜನರೇಟಿವ್ ಎಐ ಮಾಡಲ್ ಹೊರಬರುವ ಸಾಧ್ಯತೆ ಇದೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಭಾರತದಲ್ಲಿನ ಭಾಷಾ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು AI ಡೇಟಾಸೆಟ್ ಸಿದ್ಧಪಡಿಸಲಾಗುತ್ತದೆ. ಭಾರತದ AI ಮಿಷನ್ ಗಮನದಲ್ಲಿಟ್ಟುಕೊಂಡು ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ಸ್ಥಾಪಿಸಲು ಸರ್ಕಾರವು ಆದ್ಯತೆ ನೀಡಿದೆ. ಭಾರತ AI ಕಂಪ್ಯೂಟ್ ಸೌಲಭ್ಯವು ನಿರೀಕ್ಷೆಗಳನ್ನು ಮೀರಿದೆ ಮತ್ತು ಇದಕ್ಕಾಗಿಯೇ ಸರಿಸುಮಾರು 19,000 ಜಿಪಿಯು ಪಡೆದುಕೊಂಡಿದೆ. ಇವುಗಳಲ್ಲಿ 12,896 Nvidia H100 GPU ಮತ್ತು 1,480 Nvidia H200 GPU ಇವೆ. ಅವುಗಳ ಪೈಕಿ 10,000 ಜಿಪಿಯುಗಳು ಈಗ ಬಳಕೆಗೆ ಸಿದ್ಧವಾಗಿವೆ. ಈ ಸೌಲಭ್ಯವು ಎಲ್ಲರಿಗೂ ಮುಕ್ತವಾಗಲಿದ್ದು, ಮುಂದಿನ ದಿನಗಳಲ್ಲಿ ಇದರ ಕಾರ್ಯಾಚರಣೆ ಆರಂಭವಾಗಲಿದೆ ಎಂದಿದ್ದಾರೆ.