ಕೋಲ್ಕತ್ತ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚುತ್ತಿದೆ. ಕೆಲವೆಡೆ ಹಿಂದೂಗಳು, ಹಿಂದೂ ಸಂತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿರುವ ಇಸ್ಕಾನ್‌ನ ಸಂತರಿಗೆ ಮತ್ತು ಇಸ್ಕಾನ್ ಅನುಯಾಯಿಗಳಿಗೆ ಕೇಸರಿ ವಸ್ತ್ರ ಧರಿಸಬೇಡಿ, ತಿಲಕವನ್ನು ಇಡಬೇಡಿ ಎಂದು ಕೋಲ್ಕತ್ತದಲ್ಲಿರುವ ಇಸ್ಕಾನ್ ಸಂಸ್ಥೆ ಸೂಚನೆ ನೀಡಿದೆ.
ಈ ಸಂಕಷ್ಟದ ಸಮಯದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳಿ, ಕೇಸರಿ ವಸ್ತ್ರ ಧರಿಸಬೇಡಿ, ತಿಲಕ ಇಡಬೇಡಿ, ಇಟ್ಟರೂ ತಿಲಕ ಕಾಣದಂತೆ ತಲೆಗೆ ಹೊದಿಕೆ ಹಾಕಿಕೊಳ್ಳಿ, ತುಳಸಿ ಮಾಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ ಎಂದು ಸಲಹೆ ನೀಡಿದ್ದೇವೆ. ಒಂದು ವೇಳೆ ಸಂತರು ಕೇಸರಿ ವಸ್ತ್ರ ಧರಿಸಲೇ ಬೇಕೆಂದಿದ್ದರೆ ಅದರ ಮೇಲೆ ಬೇರೊಂದು ಬಟ್ಟೆ ಧರಿಸಿ. ನೀವೊಬ್ಬರು ಸಂತ ಎನ್ನುವುದು ಜನರಿಗೆ ತಿಳಿಯದಂತೆ ವರ್ತಿಸಿ ಎಂದು ಸೂಚನೆ ನೀಡಿರುವುದಾಗಿ ಕೋಲ್ಕತ್ತದ ಇಸ್ಕಾನ್ ಸಂಸ್ಥೆಯ ವಕ್ತಾರ ರಾಧಾರಮಣ ದಾಸ್ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ದೇಶದ್ರೋಹದ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಚಿನ್ಮಯ್ ಕೃಷ್ಣ ದಾಸ್ ಪರ ವಾದ ಮಂಡಿಸುತ್ತಿರುವ ಲಾಯರ್ ರಮಣ್ ರಾಯ್ ಮೇಲೆ ಕೆಲವು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಚಿನ್ಮಯ್ ಕೃಷ್ಣ ದಾಸ್ ಅವರು ಜಾಮೀನು ಅರ್ಜಿ ಮಂಗಳವಾರ ವಿಚಾರಣೆಗೆ ಬರಬೇಕಿತ್ತು. ಈ ಹಿನ್ನೆಲೆಯಲ್ಲಿ ರಾಯ್ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿರುವ ರಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾಯರ್ ಮೇಲೆ ದಾಳಿ ನಡೆದ ಬೆನ್ನಲ್ಲೇ ಇಸ್ಕಾನ್ ಬಾಂಗ್ಲಾದಲ್ಲಿರುವ ಸಂತರಿಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದೆ.