ಟೆಲ್ ಅವೀವ್: ಸಿರಿಯಾದಲ್ಲಿ ಅಸ್ಸಾದ್ ಸರ್ಕಾರ ಪತನವಾಗಿ ಬಂಡುಕೋರರು ದೇಶವನ್ನು ಹಿಡಿತಕ್ಕೆ ಪಡೆದುಕೊಂಡಿದಾರೆ. ಈ ಹಿನ್ನೆಲೆಯಲ್ಲಿ ಸಿರಿಯಾದಲ್ಲಿರುವ ಸೇನಾ ನೆಲೆಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಗಳನ್ನು ಇಸ್ರೇಲ್ ಬಹುತೇಕ ನಾಶಪಡಿಸಿದೆ.
ಬಂಡುಕೋರರು ಸಿರಿಯಾದಲ್ಲಿ ಕ್ಷಿಪ್ರ ಹೋರಾಟ ನಡೆಸಿ ಬಶರ್ ಅಲ್ ಅಸ್ಸಾದ್ ರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು. ಸಿರಿಯಾ ಬಂಡುಕೋರರ ವಶವಾಗುತ್ತಿದ್ದಂತೆ ಅಸ್ಸಾದ್ ರಷ್ಯಾಗೆ ಪಲಾಯನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಸ್ಸಾದ್ ಸಂಗ್ರಹಿಸಿಟ್ಟಿದ್ದ ಅಪಾಯಕಾರಿ ಶಸ್ತ್ರಾಸ್ತ್ರಗಳೆಲ್ಲಾ ಬಂಡುಕೋರರ ಕೈವಶವಾಗುವ ಆತಂಕ ಇತ್ತು. ಜತೆಗೆ ಈಗಾಗಲೇ ಹಮಾಸ್ ಮತ್ತು ಹಿಜ್ಬುಲ್ಲಾಗಳೊಂದಿಗೆ ಯುದ್ಧ ನಡೆಯುತ್ತಿರುವ ಇಸ್ರೇಲ್ ವಿರುದ್ದ ಈ ಅಸ್ತ್ರಗಳು ಪ್ರಯೋಗವಾಗುವ ಆತಂಕ ಇತ್ತು.
ಈ ಹಿನ್ನೆಲೆಯಲ್ಲಿ ಅಸ್ಸಾದ್ ಪಲಾಯನ ಮಾಡುತ್ತಿದ್ದಂತೆ ಇಸ್ರೇಲ್ ಮತ್ತು ಅಮೆರಿಕ ಸಿರಿಯಾದಲ್ಲಿ ಬಂಡುಕೋರರ ನೆಲೆಗಳ ಮೇಲೆ ದಾಳಿ ಆರಂಭಿಸಿದ್ದವು. ಇನ್ನು ಸಿರಿಯಾದಲ್ಲಿ ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರಗಳ ಸಂಗ್ರಹಾಗಾರಗಳನ್ನೇ ಗುರಿಯಾಗಿಸಿಕೊಂಡ ಇಸ್ರೇಲ್ 48 ಗಂಟೆಯಲ್ಲಿ 400 ಕ್ಕೂ ಹೆಚ್ಚು ಕಡೆ ವಾಯು ದಾಳಿ ನಡೆಸಿದೆ. ದಾಳಿಯಲ್ಲಿ ಸಿರಿಯಾ ಸೇನೆಯ ಶೇ. 70 ರಿಂದ 80 ರಷ್ಟು ಶಸ್ತ್ರಾಸ್ತ್ರ ಸಂಗ್ರಹಾಗಾರಗಳು ನಾಶವಾಗಿವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಇಸ್ರೇಲ್ ದಾಳಿಯಲ್ಲಿ ಸಿರಿಯಾದ ಅಲ್-ಬೈದಾ ಬಂದರು ಮತ್ತು ಲಟಾಕಿಯಾದಲ್ಲಿದ್ದ ಎರಡು ನೌಕಾ ನೆಲೆಗಳು ಮತ್ತು 15 ಯುದ್ಧ ನೌಕೆಗಳು ನಾಶವಾಗಿವೆ. ಜತೆಗೆ 80 ರಿಂದ 190 ಕಿ.ಮೀ. ವ್ಯಾಪ್ತಿಯ ಹತ್ತಾರು ಕ್ಷಿಪಣಿಗಳನ್ನು ನಾಶ ಪಡಿಸಲಾಗಿದೆ. ಇದೇ ವೇಳೆ ಸ್ಕಡ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು, ಡ್ರೋನ್‌ಗಳು, ಯುದ್ಧ ವಿಮಾನಗಳು, ಅಟ್ಯಾಕ್ ಹೆಲಿಕಾಪ್ಟರ್‌ಗಳು, ರಡಾರ್‌ಗಳು, ಟ್ಯಾಂಕ್‌ಗಳು ಮತ್ತು ಯುದ್ಧ ವಿಮಾನ ನಿಲ್ಲಿಸುವ ಹ್ಯಾಂಗರ್‌ಗಳನ್ನು ನಾಶಪಡಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.