ರಾಜ್ಯದಲ್ಲಿ ಚಳಿಯ ವಾತಾವರಣ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕೇಳೋದೇ ಬೇಡ. ಭಾರಿ ಚಳಿಯಲ್ಲಿ ಮನೆಯಿಂದ ಹೊರ ಬರೋದಕ್ಕೂ ಕಷ್ಟ ಕಷ್ಟ. ಇದರ ಜೊತೆಗೆ ಕೆಮ್ಮು, ಶೀತ, ಜ್ವರ, ವಾಂತಿ ಪ್ರಕರಣಗಳು ಹೆಚ್ಚಾಗಿವೆ. ವೈರಲ್ ಜ್ವರ ಕೂಡ ಹೆಚ್ಚಾಗಿರುವುದು ಆಸ್ಪತ್ರೆಗಳ ಅಂಕಿ ಅಂಶಗಳ ಮೂಲಕ ಮಾಹಿತಿ ತಿಳಿದು ಬಂದಿದೆ. ಕ್ಷಣ ಕ್ಷಣಕ್ಕೂ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ನ್ಯುಮೋನಿಯಾ, ವೈರಲ್ ಜ್ವರ ಹೆಚ್ಚಾಗುತ್ತಿದೆ. ಪೋಷಕರಲ್ಲೂ ಇಂತಹ ಸಮಸ್ಯೆ ಉಲ್ಬಣವಾಗಿ ಕಾಡುತ್ತಿದೆ. ಹೀಗಾಗಿ ಚಳಿಗಾಲದಲ್ಲಿ ಮಕ್ಕಳನ್ನು ಜಾಗೃತರಾಗಿ ನೋಡಿಕೊಳ್ಳುವುದಲ್ಲದೇ, ಪೋಷಕರು, ವೃದ್ಧರು ಕೂಡ ಆರೋಗ್ಯದ ಕಡೆ ಅತಿಹೆಚ್ಚು ನಿಗಾವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.