ಕಲಬುರಗಿ : ಬಿಜೆಪಿ ಶಾಸಕ ಮುನಿರತ್ನ ಗುತ್ತಿಗೆದಾರನಿಗೆ ಬೆದರಿಕೆ ಮತ್ತು ಮಹಿಳೆ ಬಗ್ಗೆ ಅವಾಚ್ಯ ಪದ ಬಳಸಿದ ಆರೋಪ ಎದುರಿಸುತ್ತಿದ್ದು, ಈ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನಿರತ್ನನ ಆ ಭಾಷೆ ಕೇಳಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಷಡ್ಯಂತ್ರದಿಂದ ಬಿಜೆಪಿ ಶಾಸಕ ಮುನಿರತ್ನರನ್ನು ಬಂಧಿಸಲಾಗಿದ್ದು, ಈ ಆರೋಪಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಷಡ್ಯಂತ್ರ ಮಾಡುವ ಅನಿವಾರ್ಯತೆ ಇಲ್ಲ. ಬಿಜೆಪಿ ರೀತಿ ಕಾಂಗ್ರೆಸ್ ಷಡ್ಯಂತ್ರ ಮಾಡಿದರೆ ಅವರಿಗೆ ಜೈಲುಗಳು ಸಾಕಾಗಲ್ಲ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ರಾಜಕಾರಣಿಗಳು ಅಂದ ಮೇಲೆ ನಮ್ಮನ್ನು ಜನ ಅನುಸರಣೆ ಮಾಡುತ್ತಾರೆ. ನಮ್ಮ ಜವಾಬ್ದಾರಿ ಏನು ಎಂಬುದನ್ನು ತಿಳಿದುಕೊಂಡು ಮಾತನಾಡಬೇಕು. ಹೆಣ್ಣು ಮಕ್ಕಳ ಬಗ್ಗೆ ನಾಲಗೆ ಬಿಗಿ ಹಿಡಿದುಕೊಂಡು ಮಾತನಾಡಬೇಕು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.