ತಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು ಜಯಂ ರವಿ.. ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದ ಅವರೀಗ ಹೆಸರು ಬದಲಿಸಿಕೊಂಡಿದ್ದಾರೆ. ಜಯಂ ರವಿ ಇನ್ಮುಂದೆ ರವಿ ಮೋಹನ್ ಆಗಿ ಬದಲಾಗಿದ್ದಾರೆ. ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶುಭ ಕೋರುತ್ತಾ ತಾವು ಇಲ್ಲಿವರೆಗೆ ಜಯಂ ರವಿಗೆ ನೀಡಿದ ಬೆಂಬಲವನ್ನು ರವಿ ಮೋಹನ್ ಹೆಸರಿಗೂ ನೀಡಬೇಕು ಎಂದಿದ್ದಾರೆ.
ಜಯಂ ರವಿ, ರವಿ ಮೋಹನ್ ಆಗಿ ಹೆಸರು ಬದಲಾಯಿಸಿಕೊಳ್ಳುವುದರ ಜೊತೆಗೆ ಹೊಸ ಪಯಣ ಕೂಡ ಆರಂಭಿಸಿದ್ದಾರೆ. 'ರವಿ ಮೋಹನ್ ಸ್ಟುಡಿಯೋಸ್' ಎಂಬ ಹೆಸರಿನ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದಾರೆ, ಈ ಸಂಸ್ಥೆಯಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಒಳ್ಳೆ ಒಳ್ಳೊಳ್ಳೆ ಸಿನಿಮಾಗಳನ್ನು, ನಿರ್ದೇಶಕರು ಹಾಗೂ ಹೊಸ ನಾಯಕರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡುವುದಾಗಿ ರವಿ ಮೋಹನ್ ಘೋಷಣೆ ಮಾಡಿದ್ದಾರೆ.
ರವಿ ಮೋಹನ್ ತಮ್ಮನ್ನು ಇಲ್ಲಿವರೆಗೆ ಬೆಳೆಸಿದ, ಬೆಂಬಲಿಸಿ ಅಭಿಮಾನಿಗಳಿಗೆ ಏನಾದರೂ ಮರಳಿ ಕೊಡಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಅದಕ್ಕಾಗಿ ರವಿ ಮೋಹನ್ ಫ್ಯಾನ್ಸ್ ಕ್ಲಬ್ ಗಳು ರವಿ ಮೋಹನ್ ಫ್ಯಾನ್ಸ್ ಫೌಂಡೇಶನ್ ಎಂಬ ರಚನಾತ್ಮಕ ಸಂಸ್ಥೆಯಾಗಿ ಪರಿವರ್ತನೆಯಾಗಿವೆ. ಈ ಫೌಂಡೇಷನ್ ಮೂಲಕ ಅಗತ್ಯವಿರುವ ಎಲ್ಲರಿಗೂ ಸಹಾಯ ಮಾಡುವುದಾಗಿ ರವಿ ಮೋಹನ್ ತಿಳಿಸಿದ್ದಾರೆ.