ಸ್ಯಾಂಡಲ್‌ವುಡ್ ಹಿರಿಯ ನಟ ಸರಿಗಮ ವಿಜಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.. ಕಾಮಿಡಿ ಕಲಾವಿದನಾಗಿ ಚಂದನವನದಲ್ಲಿ ಕಮಾಲ್ ಮಾಡಿದ್ದ ನಟ, ವಿಲನ್, ಪೋಷಕ ಪಾತ್ರಗಳಿಗೂ ಜೀವ ತುಂಬಿದ್ದರು.. 76 ವರ್ಷದ ಹಿರಿಯ ಜೀವ ಸರಿಗಮ ವಿಜಯ್, ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು.. ಹೀಗಾಗಿ ಅವರಿಗೆ ಕಳೆದ 4 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ವಿಜಯ್ ಇಂದು ಕೊನೆಯುಸಿರೆಳೆದಿದ್ದಾರೆ..
ಸುಮಾರು 250ಕ್ಕೂ ಅಧಿಕ ಸಿನಿಮಾಗಳಲ್ಲಿ ಹಿರಿಯ ನಟ ಸರಿಗಮ ವಿಜಿ ನಟಿಸಿದ್ದಾರೆ.. 75ಕ್ಕೂ ಅಧಿಕ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ.. ಕನ್ನಡ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಹಾಗೂ ವಿಜಿ ಕಾಂಬಿನೇಷನ್ ಸೂಪರ್ ಹಿಟ್ ಆಗಿತ್ತು.. ಪ್ರಭಾಕರ್ ಆಪ್ತ ಬಳಗದಲ್ಲಿನ ಕೂಡ ಸರಿಗಮ ವಿಜಿ ಗುರ್ತಿಸಿಕೊಂಡಿದ್ದರು..
ರಂಗಭೂಮಿ ಮೂಲಕ ಮುಖಕ್ಕೆ ಬಣ್ಣ ಹಚ್ಚಿದ್ದ ಸರಿಗಮ ವಿಜಿ, ಹಲವು ನಾಟಕಗಳಲ್ಲಿ ನಟಿಸಿ ಮನೆಮಾತಾಗಿದ್ದರು.. ಹಾಗಾಗಿ ಚಿತ್ರರಂಗದಲ್ಲಿಯೂ ಅವಕಾಶಗಳು ಸಿಕ್ಕಿತ್ತು.. ಹಾಸ್ಯಪಾತ್ರಗಳಲ್ಲೇ ಹೆಚ್ಚು ನಟಿಸಿದ್ದ ವಿಜಿ, ತಮ್ಮದೇ ನಟನೆ ಮೂಲಕ ಚಾಪು ಮೂಡಿಸಿದ್ದಾರೆ.. ಅದರಲ್ಲಿಯೂ ವಿಜಯ್ ಕುಮಾರ್ ನಟಿಸುತ್ತಿದ್ದ 'ಸಂಸಾರದಲ್ಲಿ ಸರಿಗಮ' ನಾಟಕ ಬಹಳ ಜನಪ್ರಿಯವಾಗಿತ್ತು.. ಹಾಗಾಗಿ ಅವರ ಹೆಸರಿನ ಜೊತೆ ಸರಿಗಮ ಎನ್ನುವುದು ಸೇರಿಕೊಂಡಿತ್ತು.. ಈ ನಾಟಕ ಸಾವಿರಕ್ಕೂ ಅಧಿಕ ಪ್ರದರ್ಶನ ಕಂಡಿತ್ತು.. 1980ರಲ್ಲಿ ಗೀತಪ್ರಿಯಾ ನಿರ್ದೇಶನದ 'ಬೆಳವಳದ ಮಡಿಲಲ್ಲಿ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ ಸರಿಗಮ ವಿಜಿ, ಬರೋಬ್ಬರಿ 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ..
ಮೂಲತಃ ಬೆಂಗಳೂರಿನವರಾದ ಸರಿಗಮ ವಿಜಿ, ಘಟಾನುಘಟಿ ನಾಯಕರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.. ಹಳೆ ತಲೆಮಾರಿನ ಹೀರೋಗಳ ಜೊತೆ ಮಾತ್ರವಲ್ಲದೇ ಹೊಸ ಪೀಳಿಗೆಯ ಜೊತೆಯೂ ನಟಿಸಿದ್ದರು.. ಅಷ್ಟು ಮಾತ್ರವಲ್ಲ ಹಿರಿಯ ನಿರ್ದೇಶಕರ ಜೊತೆಯೂ ಸಹಾಯಕರಾಗಿ ಕೆಲಸ ಮಾಡಿದ್ದಾರೆ.. ಮದುವೆ ಮಾಡಿ ನೋಡು, ಭೀಮಾ, ಮನ ಮೆಚ್ಚಿದ ಸೊಸೆ, ಜಗತ್ ಕಿಲಾಡಿ, ಯಮಲೋಕದಲ್ಲಿ ವೀರಪ್ಪನ್, ದುರ್ಗಿ ಹಾಗೂ ಸ್ವಾರ್ಥರತ್ನ ಸೇರಿ ಮುಂತಾದ ಸಿನಿಮಾಗಳಲ್ಲಿ ವಿಜಿ ನಟಿಸಿದ್ದಾರೆ..
ಬಹುಅಂಗಾಂಗ ವೈಫಲ್ಯದಿಂದಾಗಿ ಕಳೆದ 4 ದಿನಗಳಿಂದ ಯಶವಂತಪುರದ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರಿಗಮ ವಿಜಿ,, ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಬದುಕಿನ ಪಯಣ ಮುಗಿಸಿದ್ದಾರೆ.. ಹಿರಿಯ ನಟನ ಅಗಲಿಕೆಗೆ ಸ್ಯಾಂಡಲ್‌ವುಡ್‌ನ ಕಂಬನಿ ಮಿಡಿದಿದೆ.. ಇಂದು ಮಹಾಲಕ್ಷ್ಮೀ ಲೇಔಟ್‌ನ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ..