ವಾಷಿಂಗ್ಟನ್: ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಪುತ್ರನಿಗೆ ಕ್ಷಮಾದಾನ ನೀಡಿದ ಬೆನ್ನಲ್ಲೇ ಈಗ ನಾಲ್ವರು ಭಾರತೀಯರು ಸೇರಿ 1500 ಜನರಿಗೆ ಕ್ಷಮಾದಾನ ಮತ್ತು ಶಿಕ್ಷೆ ಕಡಿತ ಮಾಡಿ ಆದೇಶ ಹೊರಡಿಸಿದ್ದಾರೆ.
ವಿವಿಧ ಕಾರಣಗಳಿಂದ ಜೈಲುಶಿಕ್ಷೆ ಅನುಭವಿಸುತ್ತಿದ್ದ 1,500 ಮಂದಿಯಲ್ಲಿ 39 ಜನರಿಗೆ ಕ್ಷಮಾದಾನನೀಡಲಾಗಿದ್ದರೆ, ಉಳಿದವರ ಶಿಕ್ಷೆ ಕಡಿತ ಮಾಡಲಾಗಿದೆ. ಕನಿಷ್ಠ ಒಂದು ವರ್ಷ ಗೃಹಬಂಧನ ಶಿಕ್ಷೆ ಪೂರ್ಣಗೊಳಿಸಿದವರನ್ನು ಬಿಡುಗಡೆಗೊಳಿಸಲು ಗುರುವಾರ ಪ್ರಕಟಿಸಲಾದ ಆದೇಶದಲ್ಲಿ ತಿಳಿಸಲಾಗಿದೆ. ಈ ಮೂಲಕ ಭಾರತೀಯರಾದ ಮೀರಾ ಸಚ್ದೇವ, ವಿಕ್ರಮ್ ದತ್ತಾ, ಕೃಷ್ಣ ಮೋಟೆ ಮತ್ತು ಬಾಬುಭಾಯ್ ಪಟೇಲ್ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡು ಕ್ಷಮಾದಾನ ಅರ್ಜಿಗಳ ಪರಿಶೀಲನೆ ನಡೆಸುವುದಾಗಿ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ. 2017ರಲ್ಲಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ಸಂದರ್ಭದಲ್ಲಿ ಬರಾಕ್ ಒಬಾಮ ಅವರು ಒಂದೇ ದಿನ 330 ಮಂದಿಗೆ ಕ್ಷಮಾದಾನ ನೀಡಿದ್ದರು.
ಅಕ್ರಮವಾಗಿ ಬಂದೂಕು ಇಟ್ಟುಕೊಂಡಿದ್ದ ಹಾಗೂ ತೆರಿಗೆ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಇದೇ ವರ್ಷದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪುತ್ರ ಹಂಟರ್ ಅವರನ್ನು ದೋಷಿ ಎಂದು ಫೆಡರಲ್ ನ್ಯಾಯಾಲಯ ತೀರ್ಪು ನೀಡಿತ್ತು. ಬಂಧನ ಭೀತಿ ಎದುರಿಸುತ್ತಿದ್ದ ಪುತ್ರನಿಗೆ ಬೈಡನ್ ಈ ತಿಂಗಳ ಆರಂಭದಲ್ಲಿ ಕ್ಷಮಾದಾನ ನೀಡಿದ್ದರು.