ಕಲಬುರಗಿ : ಕಲುಷಿತ ನೀರು ಸೇವಿಸಿ 80ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆಯೊಂದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ನಡೆದಿದೆ. ಈ ಹಿನ್ನೆಲೆ ನಿಂಬರ್ಗಾ ಪಿಡಿಒ ಸುಕನ್ಯಾ ಎಂಬವರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಅಸ್ವಸ್ಥಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಗ್ರಾಮದಲ್ಲಿ ಇಂತಹ ಅವಘಡ ಸಂಭವಿಸಲು ಗ್ರಾಪಂ ಪಂಚಾಯತಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಟ್ಯಾಂಕ್ ಸ್ವಚ್ಛಗೊಳಿಸುವಂತೆ ಅನೇಕ ಬಾರಿ ಹೇಳಿದ್ದರೂ ಗಮನ ಹರಿಸದಿದ್ದಕ್ಕೆ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಘಟನೆ ಸಂಬಂಧ ನಿಂಬರ್ಗಾ ಗ್ರಾಮಕ್ಕೆ ಶಾಸಕ ಬಿ. ಆರ್ ಪಾಟೀಲ್ ಭೇಟಿ ನೀಡಿದ್ದು, ಆಸ್ಪತ್ರೆಗೆ ತೆರಳಿ ಜನರ ಆರೋಗ್ಯ ವಿಚಾರಿಸಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದ ಮೆಡಿಕಲ್ ಆಫೀಸರ್ ಡಾ. ಇರ್ಫಾನ್ ಅಲಿ ಅವರೊಂದಿಗೆ ಸಮಾಲೋಚನೆ ನಡೆಸಿ ಜನರ ಆರೋಗ್ಯದ ಸ್ಥೀತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಇದೇ ವೇಳೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಇನ್ಸ್ ಪೆಕ್ಟರ್ ಅಕ್ಕಮಹಾದೇವಿ ಅವರ ನೇತೃತ್ವದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ತಿಳೀದು ಬಂದಿಂದೆ.