ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮಾತ್ರವಲ್ಲ ರಣಜಿ ಟ್ರೋಫಿಯಲ್ಲಿಯೂ ಟೀಂ ಇಂಡಿಯಾದ ಸ್ಟಾರ್ ಆಟಗಾರರ ಕಳಪೆ ಪ್ರದರ್ಶನ ಮುಂದುವರೆದಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧದ ಮ್ಯಾಚ್‌ನಲ್ಲಿ ಭಾರತ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಕೇವಲ 6 ರನ್ ಗಳಿಸಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ದೆಹಲಿ ಪರ ಕಣಕ್ಕಿಳಿದಿರುವ ಕಿಂಗ್ ಕೊಹ್ಲಿ ಆಟ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸ್ಟೇಡಿಯಂಗೆ ಆಗಮಿಸಿದ್ದರು. ರಣಜಿ ಟ್ರೋಫಿಯ 'ಡಿ' ಗುಂಪಿನ ಪಂದ್ಯದ ದ್ವಿತೀಯ ದಿನದಾಟದಲ್ಲಿ ಬ್ಯಾಟಿಂಗ್ ನಡೆಸಿದ ಕೊಹ್ಲಿ, 15 ಎಸೆತ ಎದುರಿಸಿ 6 ಗಳಿಸಿ ಹಿಮಾಂಶು ಸಾಂಗ್ವಾನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ವಿರಾಟ್ ಆಟ ನೋಡಲು ಸಾಗರೋಪಾದಿಯಲ್ಲಿ ಹರಿದು ಅಭಿಮಾನಿಗಳು ಕೊಹ್ಲಿ ಔಟಾಗುತ್ತಿದ್ದಂತೆ ನಿರಾಸೆಗೊಂಡರು. ಇತ್ತೀಚೆಗೆ ಭಾರತದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್‌ಗೆ ದೇಶೀ ಕ್ರಿಕೆಟ್‌ನಲ್ಲಿ ಆಟವಾಡಲು ಬಿಸಿಸಿಐ ಸೂಚಿಸಿತ್ತು. ಹೀಗಾಗಿ ಬಹುತೇಕ ಆಟಗಾರರು ರಣಜಿ ಟೂರ್ನಿಮೆಂಟ್‌ನಲ್ಲಿ ಕಣಕ್ಕಿಳಿದಿದ್ದರು. ಆದ್ರೆ ದೇಶೀ ಕ್ರೀಡೆಯಲ್ಲಿಯೂ ಆಟಗಾರರ ಕಳಪೆ ಪ್ರದರ್ಶನ ಮುಂದುವರೆದಿದೆ.