ತುಮಕೂರು : ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಫೀಲ್ಡ್ ಗಿಳಿದಿದ್ದು, ಕಾರ್ಯಾಚರಣೆ ನಡೆಸಿ ಒತ್ತುವರಿ ಮಾಡಿಕೊಂಡಿದ್ದ ಮಾಲ್ ಕಾಂಪೌಂಡ್ ತೆರವು ಮಾಡಲಾಗಿದೆ. ತುಮಕೂರಿನ ಶಿರಾ ಗೇಟ್ ಬಳಿಯಿರುವ ಎಸ್ ಮಾಲ್ ಕಾಂಪೌಂಡ್ ತೆರವು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಹೌದು, ಎಸ್.ಮಾಲ್ ಮಾಲೀಕರು ರಸ್ತೆಯನ್ನ ಒತ್ತುವರಿ ಮಾಡಿಕೊಂಡು ಮಾಲ್ ಕಾಂಪೌಂಡ್ ನಿರ್ಮಿಸಿಕೊಂಡಿದ್ದರು. ಒತ್ತುವರಿ ಮಾಡಿಕೊಂಡಿರುವ ಜಾಗ ತೆರವು ಮಾಡುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಹಲವು ಬಾರಿ ಸೂಚಿಸಿದ್ದರು. ಈ ಸಂಬಂಧ ಹಲವು ವರ್ಷಗಳಿಂದ ಮಹಾನಗರ ಪಾಲಿಕೆ ಜೊತೆ ಕಾನೂನು ಹೋರಾಟ ನಡೆಯುತ್ತಿತ್ತು.

ತುಮಕೂರು ಮಹಾನಗರ ಪಾಲಿಕೆ ಕಮಿಷನರ್ ಅಶ್ವಿಜಾ ಬಿ.ವಿ ಆದೇಶದ ಮೇರೆಗೆ, ಇಂದು ಬೆಳಂಬೆಳಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಫೀಲ್ಡ್ ಗಿಳಿದಿದ್ದು, ಪಾಲಿಕೆ ಕಾರ್ಯಾಪಾಲಕ ಇಂಜಿನಿಯರ್ ವಿನಯ್ ನೇತೃತ್ವದಲ್ಲಿ ಜೆಸಿಬಿಗಳ ಮೂಲಕ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್ ತೆರವು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ತುಮಕೂರು ಮಹಾನಗರ ಪಾಲಿಕೆ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ.