ದೇಶ

ಲವ್‌ ಜಿಹಾದ್‌ ವಿರುದ್ಧ ಸಿಡಿದೆದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್‌ ಸರ್ಕಾರ

ಲವ್ ಜಿಹಾದ್ ವಿರುದ್ಧ ಏಳು ಮಂದಿಯ ವಿಶೇಷ ಸಮಿತಿಯನ್ನು ಮಹಾರಾಷ್ಟ್ರ ಸರ್ಕಾರ ಶುಕ್ರವಾರ ನೇಮಕ ಮಾಡಿದೆ.

ಡಿಜಿಪಿಯವರ ಹೊರತಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ, ಕಾನೂನು ಮತ್ತು ನ್ಯಾಯಾಂಗ ಇಲಾಖೆ, ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು ಇಲಾಖೆಗಳಿಂದ ತಲಾ ಒಬ್ಬರು ಹಾಗೂ ಗೃಹ ಇಲಾಖೆಯಿಂದ ಇಬ್ಬರು ಪ್ರತಿನಿಧಿಗಳು ಈ ಸಮಿತಿಯಲ್ಲಿ ಇರುತ್ತಾರೆ ಎಂದು ಸರ್ಕಾರಿ ನಿರ್ಣಯದಲ್ಲಿ ವಿವರಿಸಲಾಗಿದೆ. ಸರ್ಕಾರಿ ನಿರ್ಣಯ 'ಲವ್ ಜಿಹಾದ್' ಎಂಬ ಪದವನ್ನು ಒಳಗೊಂಡಿದೆ.
ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಶಾಸನಗಳನ್ನು ಜಾರಿಗೆ ತಂದ ಬಳಿಕ ಮಹಾರಾಷ್ಟ್ರ ಸರ್ಕಾರ ಕೂಡಾ, ಮತಾಂತರಗೊಳಿಸಿ ಅಂತರ್ ಧರ್ಮೀಯ ವಿವಾಹದ ಪ್ರಕರಣಗಳಲ್ಲಿ ಬಲವಂತದ ಧಾರ್ಮಿಕ ಮತಾಂತರ ವಿರುದ್ಧ ಕಾನೂನುಗಳನ್ನು ರೂಪಿಸಲು ಯೋಜಿಸಿತ್ತು ಎಂದು ಫಡ್ನವೀಸ್ ಹೇಳಿದ್ದಾರೆ.
ಪ್ರಸ್ತುತ ಪರಿಸ್ಥಿತಿಯ ಅವಲೋಕನ, ಲವ್ ಜಿಹಾದ್ ಪ್ರಕರಣಗಳನ್ನು ಮತ್ತು ಬಲವಂತದ ಧಾರ್ಮಿಕ ಪ್ರಕರಣಗಳನ್ನು ನಿರ್ವಹಿಸುವುದು, ಇತರ ರಾಜ್ಯಗಳ ಕಾನೂನುಗಳ ಪರಿಶೀಲನೆ, ಕಾನೂನು ಚೌಕಟ್ಟು ರೂಪಿಸುವುದು ಮತ್ತು ಕಾನೂನಾತ್ಮಕ ಪರಿಣಾಮಗಳನ್ನು ಪರಾಮರ್ಶೆ ಮಾಡುವ ಹೊಣೆಯನ್ನು ನೂತನ ಸಮಿತಿಗೆ ವಹಿಸಲಾಗಿದೆ. ಲವ್ ಜಿಹಾದ್ ಮತ್ತು ಬಲವಂತದ ಧಾರ್ಮಿಕ ಮತಾಂತರವನ್ನು ತಡೆಯುವಂತೆ ಕೋರಿ ಸಾರ್ವಜನಿಕ ಪ್ರತಿನಿಧಿಗಳು, ಸಂಘಟನೆಗಳು ಮತ್ತು ನಾಗರಿಕರಿಂದ ಬಂದ ಮನವಿಗಳ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಲಾಗಿದೆ.