ಸ್ಪೆಷಲ್ ಸ್ಟೋರಿ

ಕವಿಕುಲ ಗುರು ವಾಲ್ಮಿಕಿ: ಮಹರ್ಷಿ ವಾಲ್ಮಿಕಿ ಜಯಂತಿಯ ಇತಿಹಾಸ, ಮಹತ್ವ..!

ನಮ್ಮ ದೇಶದ ಮೊಟ್ಟ ಮೊದಲ ಮಹಾಕಾವ್ಯ ರಾಮಾಯಣವನ್ನ ರಚಿಸಿದ ಮಹಾಕವಿ ವಾಲ್ಮಿಕಿ ಜಯಂತಿ ಇಂದು.

ನಮ್ಮ ದೇಶದ ಮೊಟ್ಟ ಮೊದಲ ಮಹಾಕಾವ್ಯ ರಾಮಾಯಣವನ್ನ ರಚಿಸಿದ ಮಹಾಕವಿ ವಾಲ್ಮಿಕಿ ಜಯಂತಿ ಇಂದು.
ರಾಮಾಯಣ ಇದು ಬರಿ ಪುಸ್ತಕವಲ್ಲ, ಪ್ರತಿಯೊಬ್ಬರ ಬದುಕಿಗೆ ದಾರಿ ದೀಪವಾಗುವ ಕೈಪಿಡಿ, ಸಂಸ್ಕೃತದಲ್ಲಿ ರಚಿಸಲಾಗಿರುವ ರಾಮಾಯಣ ಮಹಾಕಾವ್ಯವು 24,000 ಶ್ಲೋಕಗಳನ್ನು ಹೊಂದಿದೆ. ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ. ಇಂದಿಗೂ ಸಹ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ.

ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ.

ಮಹರ್ಷಿ ವಾಲ್ಮೀಕಿಯ ಹಿನ್ನಲೆ:
ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರ . ನಾರದನ ಉಪದೇಶದಿಂದ ರತ್ನಾಕರನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸ ಮುನಿಯ ಮಗ. ಹೀಗಾಗಿ ಅವರಿಗೆ 'ಪ್ರಾಚೇತಸ' ಎಂಬ ಹೆಸರಿದೆ.
ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ 'ವಾಲ್ಮೀಕಿ' ಎಂಬ ಹೆಸರು ಬಂತು ಎಂದು ಹೇಳುತ್ತಾರೆ.

ದರೋಡೆಕೋರ ಮಹರ್ಷಿಯಾಗಿದ್ದು ಹೇಗೆ ಗೊತ್ತಾ?
ಒಮ್ಮೆ ನಾರದ ಮುನಿ ಕಾಡಿನಲ್ಲಿ ಹಾದುಹೋಗುತ್ತಿದ್ದಾಗ, ವಾಲ್ಮೀಕಿ ಅವನನ್ನು ಸೆರೆಯಲ್ಲಿಟ್ಟುಕೊಂಡನು. ಆಗ ನಾರದ ಮುನಿಗಳು ವಾಲ್ಮೀಕಿ ಮಹರ್ಷಿಗಳನ್ನು ಕುರಿತು ನೀವು ಮಾಡುತ್ತಿರುವುದು ಪಾಪದ ಕೃತ್ಯ, ನಿಮ್ಮ ಪಾಪದ ಪಾಲುದಾರಿಕೆಯಲ್ಲಿ ನಿಮ್ಮ ಕುಟುಂಬವೂ ಕೂಡ ಸೇರಿಕೊಳ್ಳುತ್ತದೆ.
ಸಿಕ್ಕ ಸಿಕ್ಕವರನ್ನು ಸೆರೆಯಲ್ಲಿಟ್ಟು ಹಿಂಸಿಸುವ ಬದಲು ನಿಮ್ಮ ಕುಟುಂಬವನ್ನು ಸೆರೆಯಲ್ಲಿಟ್ಟು ನೋಡಿ ಅವರು ಸೆರೆವಾಸದಲ್ಲಿರಲು ಒಪ್ಪುತ್ತಾರೆಯೇ ನೋಡಿ ಎಂದು ಹೇಳಿದರು. ಆಗ ವಾಲ್ಮೀಕಿ ಕುಟುಂಬದ ಎಲ್ಲಾ ಸದಸ್ಯರನ್ನು ಕುರಿತು ನನ್ನ ಪಾಪದ ಪಾಲುದಾರರಾಗುವಿರೇ ಎಂದು ಕೇಳಿದಾಗ ಎಲ್ಲರೂ ಅವರನ್ನು ನಿರಾಕರಿಸುತ್ತಾರೆ.
ಇದು ವಾಲ್ಮೀಕಿಗೆ ಪ್ರಪಂಚದ ಬಗ್ಗೆ ತಿಳಿದುಕೊಳ್ಳಲು ಕಾರಣವಾಯಿತು ಮತ್ತು ನಂತರ ನಾರದರ ಬಳಿ ತಾನು ಮಾಡಿದ ಪಾಪಕ್ಕೆ ಮೋಕ್ಷವನ್ನು ಕೇಳಿದರು. ಆಗ ನಾರದರು ಅವನಿಗೆ ರಾಮ ಎಂಬ ಮಂತ್ರವನ್ನು ಪಠಿಸುವಂತೆ ಸಲಹೆಯನ್ನು ನೀಡಿದನು. ನಾರದರ ಮಾತಿನಿಂದ ಪ್ರಭಾವಿತನಾದ ವಾಲ್ಮೀಕಿ ತಪಸ್ಸಿಗೆ ಕುಳಿತುಕೊಂಡು ರಾಮ ನಾಮವನ್ನು ಜಪಿಸಲು ಆರಂಭಿಸಿದರು. ಅಂದಿನಿಂದ ರತ್ನಾಕರ ಎನ್ನುವ ಕ್ರೂರಿ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆ ಹೊಂದಿದರು.