ದೇವಸ್ಥಾನದ ವಿಗ್ರಹಗಳಿಗೆ ಕೋಳಿ ಮೊಟ್ಟೆ ಹೊಡೆಯುತ್ತಿದ್ದ ಕಿಡಿಗೇಡಿಯನ್ನು, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅರೆಸ್ಟ್ ಮಾಡಿದ್ದಾರೆ. ಪ್ರಸಿದ್ದ ದೇವಾಲಯಗಳ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದ್ದ, ಮಂಜುನಾಥ (29) ಎಂಬಾತ ಅರೆಸ್ಟ್ ಆಗಿದ್ದಾನೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಕುರುಬರಹಳ್ಳಿ ಕಾಡೇನಹಳ್ಳಿಯ ನಿವಾಸಿಯಾದ ಈತ, ಗೋಡೇಕೆರೆ ಗ್ರಾಮದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದ ಗರ್ಭಗುಡಿಯ ಪಕ್ಕದ ಬಲಭಾಗದ ವೀರಭದ್ರೇಶ್ವರ ವಿಗ್ರಹ, ಮತ್ತು ಎಡಭಾಗದ ಗದ್ದುಗೆಯ ಲಿಂಗಕ್ಕೆ ಮೊಟ್ಟೆ ಹೊಡೆದಿದ್ದ. ಹಾಗೂ ಭಾವನಹಳ್ಳಿ ಶ್ರೀ ನಿರ್ವಾಣಸ್ವಾಮಿ ದೇವಸ್ಥಾನ, ದಬ್ಬೇಘಟ್ಟ ಗ್ರಾಮದ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿನ ವಿಗ್ರಹಗಳಿಗೆ ಕೋಳಿ ಮೊಟ್ಟೆ ಹೊಡೆದು ಅಪವಿತ್ರಗೊಳಿಸಿದ್ದ. ಈ ಬಗ್ಗೆ ಭಕ್ತರು ಚಿಕ್ಕನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದ ಆರೋಪದಲ್ಲಿ ದೂರು ದಾಖಲಾಗಿದ್ದು, ಇದೀಗ ಆರೋಪಿ ಅರೆಸ್ಟ್ ಆಗಿದ್ದಾನೆ.