ವಿದೇಶ

ಮೋಸ್ಟ್‌ ವಾಂಟೆಡ್‌ ಜೈಷ್‌ ಉಗ್ರ ಮಸೂದ್‌ ಅಜರ್‌ಗೆ ಹೃದಯಾಘಾತ

ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮೋಸ್ಟ್‌ ವಾಂಟೆಡ್‌ ಉಗ್ರ ಮೌಲಾನಾ ಮಸೂದ್‌ ಅಜರ್‌ಗೆ ಹೃದಯಾಘಾತವಾಗಿದ್ದು, ಆತನನ್ನು ಪಾಕಿಸ್ತಾನದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಇಸ್ಲಾಮಾಬಾದ್‌: ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮೋಸ್ಟ್‌ ವಾಂಟೆಡ್‌ ಉಗ್ರ ಮೌಲಾನಾ ಮಸೂದ್‌ ಅಜರ್‌ಗೆ ಹೃದಯಾಘಾತವಾಗಿದ್ದು, ಆತನನ್ನು ಪಾಕಿಸ್ತಾನದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಮಸೂದ್‌ ಅಜರ್‌ ಅಫ್ಘಾನಿಸ್ತಾನದ ಖೋಸ್ಟ್‌ ಪ್ರಾಂತ್ಯದ ಪ್ರಾಂತ್ಯದ ಗೋರ್ಬಾಜ್ ಪ್ರದೇಶದಲ್ಲಿ ಅಡಗಿಕೊಂಡಿದ್ದ. ಅಲ್ಲಿ ಆತನಿಗೆ ಹೃದಯಾಘಾತವಾಗಿದೆ. ತಕ್ಷಣ ಆತನನ್ನು ಅಫ್ಘಾನಿಸ್ತಾನದಿಂದ ಪಾಕಿಸ್ತಾನದ ಕರಾಚಿಗೆ ಸ್ಥಳಾಂತರಿಸಲಾಗಿದೆ. ಕರಾಚಿಯಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಮಸೂದ್‌ ನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಸ್ಲಾಮಾಬಾದ್ನಿಂದ ಹೃದ್ರೋಗ ತಜ್ಞರು ಕೂಡ ಕರಾಚಿ ತಲುಪುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶೀಘ್ರದಲ್ಲೇ ರಾವಲ್ಪಿಂಡಿಯ ಅತಿದೊಡ್ಡ ಮತ್ತು ಸುಸಜ್ಜಿತ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಭಯೋತ್ಪಾದಕ ಸಂಘಟನೆ ಜೈಷ್‌--ಮೊಹಮ್ಮದ್ ಸಂಸ್ಥಾಪಕ ಮಸೂದ್ ಅಜರ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿದ್ದಾನೆ.  ಸೆಪ್ಟೆಂಬರ್ 2019 ರಲ್ಲಿ, ಭಾರತ ಅಜರ್ ಮತ್ತು ಇನ್ನೊಬ್ಬ ಪಾಕಿಸ್ತಾನಿ ಭಯೋತ್ಪಾದಕ, ಲಷ್ಕರ್--ತೊಯ್ಬಾ ಸಂಸ್ಥಾಪಕ ಹಫೀಜ್ ಮುಹಮ್ಮದ್ ಸಯೀದ್ ರನ್ನು ಯುಎಪಿಎ ಅಡಿಯಲ್ಲಿಭಯೋತ್ಪಾದಕರುಎಂದು ಘೋಷಿಸಿತ್ತು.

ಡಿಸೆಂಬರ್ 1999 ರಲ್ಲಿ, ಕಠ್ಮಂಡುವಿನಿಂದ ದೆಹಲಿಗೆ ಬರುತ್ತಿದ್ದ ವಿಮಾನವನ್ನು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರ್ಗೆ ತೆಗೆದುಕೊಂಡು ಹೋಗಲಾಗಿತ್ತು. ಆ ಸಂದರ್ಭದಲ್ಲಿ ಪ್ರಯಾಣಿಕರಿಗೆ ಬದಲಾಗಿ ಮಸೂದ್‌ ಅಜರ್‌ ನನ್ನು ಬಿಡುಗಡೆ ಮಾಡಲಾಗಿತ್ತು. ಬಳಿಕ ಆತ ಜೈಷ್‌--ಮೊಹಮ್ಮದ್ ಅನ್ನೋ ಭಯೋತ್ಪಾದಕ ಸಂಘಟನೆಯನ್ನು ಸ್ಥಾಪಿಸಿದ್ದ.

ಮಸೂದ್‌ ಅಜರ್‌ ಹಲವು ವರ್ಷಗಳಿಂದ ಪಾಕಿಸ್ತಾನದಲ್ಲೇ ಆಶ್ರಯ ಪಡೆದಿದ್ದು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಹಲವು ವರ್ಷಗಳಿಂದ ಮಸೂದ್ ಅಜರ್ ತನ್ನ ದೇಶದಲ್ಲೇ ಇದ್ದರೂ ಈ ವಿಚಾರವನ್ನು ಪಾಕಿಸ್ತಾನ ನಿರಾಕರಿಸಿತ್ತು. ಆದರೆ ಇತ್ತೀಚೆಗಷ್ಟೇ ಮಸೂದ್ ಅಜರ್ ಆರೋಗ್ಯ ಹದಗೆಟ್ಟಿದ್ದು, ಆತ ಪಾಕಿಸ್ತಾನದಲ್ಲಿದ್ದಾನೆ ಎಂದು ಪಾಕಿಸ್ತಾನ ಒಪ್ಪಿಕೊಂಡಿತ್ತು.