ಕರ್ನಾಟಕ

ಕೊಳೆತ ತಿಪ್ಪೆಯಂತಾದ ಮಿನಿ ವಿಧಾನಸೌಧ.!! ಸಾರ್ವಜನಿಕರ ಆಕ್ರೋಶ..!

ಮಿನಿ ವಿಧಾನಸೌಧ ಕಟ್ಟಡ ನಿರ್ಲಕ್ಷ್ಯಕ್ಕೊಳಗಾಗಿದ್ದು, ಮಳೆಗಾಲ ಬಂದರೆ ಸಾಕು ಯಾರೂ ಕೇಳೋರೆ ಇಲ್ಲದಂತಾಗಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು, ಮಳೆ ನೀರು ತೊಟ್ಟಿಕ್ಕುವುದಕ್ಕೆ ಛಾವಣಿ ಮೇಲಿನ ದುಸ್ಥಿತಿಯೇ ಕಾರಣ ಎಂದು ಕಿಡಿಕಾರಿದ್ದಾರೆ.

ಕೊಪ್ಪಳ : ಮಳೆಗಾಲ ಬಂದರೆ ಸಾಕು ಇಲ್ಲಿನ ಕೆಲ ಕೊಠಡಿಗಳು, ಕಾರಿಡಾರ್ ಮತ್ತಿತರೆ ಸ್ಥಳಗಳಲ್ಲಿ ನೀರು ತೊಟ್ಟಿಕ್ಕುತ್ತದೆ. ಕಚೇರಿಯ ಪ್ರಾಂಗಣದ ಅಲ್ಲಲ್ಲಿ ನೀರು ಸಂಗ್ರಹವಾಗಿದ್ದು, ಜನ, ಸಿಬ್ಬಂದಿ ಅದರಲ್ಲೇ ನಡೆದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ.

ಮಿನಿ ವಿಧಾನಸೌಧ ಕಟ್ಟಡ ನಿರ್ಲಕ್ಷ್ಯಕ್ಕೊಳಗಾಗಿದ್ದು, ಮಳೆಗಾಲ ಬಂದರೆ ಸಾಕು ಯಾರೂ ಕೇಳೋರೆ ಇಲ್ಲದಂತಾಗಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು, ಮಳೆ ನೀರು ತೊಟ್ಟಿಕ್ಕುವುದಕ್ಕೆ ಛಾವಣಿ ಮೇಲಿನ ದುಸ್ಥಿತಿಯೇ ಕಾರಣ. ಇಡೀ ಕಟ್ಟಡದ ಛಾವಣಿಯ ಮೇಲೆಲ್ಲ ತರಹೇವಾರಿ ತ್ಯಾಜ್ಯ, ಮರಗಳಿಂದ ಉದುರಿದ ಎಲೆಗಳ ರಾಶಿಯೇ ಇದ್ದು, ಬಹಳ ದಿನಗಳಿಂದಲೂ ಸ್ವಚ್ಛಗೊಳಿಸದೆ ಹಾಗೆ ಬಿಡಲಾಗಿದೆ. ಅದೇ ರೀತಿ ಪೈಪ್‌ಗಳು, ಕೇಬಲ್‌ ಇತರೆ ವಸ್ತುಗಳು ಅಡ್ಡಾದಿಡ್ಡಿಯಾಗಿ ಬಿದ್ದಿರುವುದರಿಂದ ಮಳೆ ನೀರು ಹರಿದುಹೋಗದೆ ಅಲ್ಲಿಯೇ ನಿಲ್ಲುತ್ತದೆ. ತ್ಯಾಜ್ಯವೆಲ್ಲ ಕೊಳೆತು ತಿಪ್ಪೆಯಂತಾಗಿದ್ದು, ದುರ್ನಾತ ಬೀರುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.‌ ನಿರ್ವಹಣೆ ಹೊಣೆ ಹೊತ್ತಿರುವ ಕಂದಾಯ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. 

2007ರಲ್ಲಿ ಹೆಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮಿನಿ ವಿಧಾನಸೌಧ ನಿರ್ಮಾಣವಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ದಶಕದ ಅವಧಿಯಲ್ಲಿಯೇ ಕೊಠಡಿಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಕಟ್ಟಡ ಸೋರುತ್ತಿರುವುದು ಗಮನಕ್ಕೆ ಬಂದರೂ ಮೌನಕ್ಕೆ ಶರಣಾಗಿರುವುದು ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿಯಾಗಿದೆ ಎಂದು ವಕೀಲ ಶಿವಕುಮಾರ ದೊಡ್ಡಮನಿ ಆರೋಪಿಸಿದ್ದಾರೆ.