ಆನ್‌ಲೈನ್ ಗೇಮಿಂಗ್ ಹುಚ್ಚಾಟ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಹಣ ಡಬಲ್ ಮಾಡುವ ಆಸೆಯಲ್ಲಿ, ಇರೋ ಬರೋ ಹಣವನ್ನೆಲ್ಲ ಸುರಿದು ನಷ್ಟ ಅನುಭವಿಸ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೇ ಹುಚ್ಚಾಟದಿಂದ ಒಂದೇ ದಿನ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಜಯನಗರ ಜಿಲ್ಲೆ ಮೂಲದ ಮಲ್ಲಿಕಾರ್ಜುನ ಎಂಬಾತ ಬೆಂಗಳೂರಿನಲ್ಲಿ ನೆಲೆಸಿದ್ದು, ನಾಲ್ಕು ವರ್ಷಗಳಿಂದ ಆನ್‌ಲೈನ್ ಗೇಮಿನ ಹುಚ್ಚಿಗೆ ಬಿದ್ದಿದ್ದ. ಖಾಸಗಿ ಆಸ್ಪತ್ರೆತೊಂದರಲ್ಲಿ ಮೆಡಿಕಲ್ ಅಸಿಸ್ಟೆಂಟ್ ಆಗಿದ್ದ ಈತ, ಆನ್‌ಲೈನ್ ಗೇಮ್‌ನಿಂದ ಲಾಸ್ ಆಗಿದ್ದ. ಲಾಸ್ ಆದ್ರೂ ಕೂಡ ಮತ್ತೆ ಮತ್ತೆ ಆಟವಾಡಿ ಹಣ ಕಳೆದುಕೊಂಡಿದ್ದ. ಕೊನೆಗೆ ಪಿಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದರ ಜೊತೆಗೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳ್ಳಾರಿ ಮೂಲದ ಆಟೋ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ, ಕುಟುಂಬಸ್ಥರು ಮನೆಯಲ್ಲಿ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.