ಕಾಂತಾರ ಸೂಪರ್ ಹಿಟ್ ಬೆನ್ನಲ್ಲೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಪರಭಾಷಾ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಪರಭಾಷೆಯ ಜೈ ಹನುಮಾನ್ ಚಿತ್ರದಲ್ಲಿ ಇದೀಗ ಆಂಜನೇಯನ ಪಾತ್ರದಲ್ಲಿ ರಿಷಬ್ ನಟಿಸುತ್ತಿದ್ದಾರೆ. ಆದರೆ ಇದೇ ಚಿತ್ರದ ವಿವಾದದಿಂದ ನಟ ರಿಷಬ್ ಶೆಟ್ಟಿಗೆ ಕಾನೂನು ಕಂಟಕವಾಗಿದೆ. ಅಂದರೆ ಸಿನಿಮಾ ಪೋಸ್ಟರ್‌ನಲ್ಲಿ ಆಂಜನೇಯನನ್ನು ಮಾನವ ರೂಪದಲ್ಲಿ ತೋರಿಸಿ, ದೇವರನ್ನೇ ವಿರೂಪಗೊಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದೇ ಆರೋಪದಡಿ ನಟ ರಿಷಬ್ ಶೆಟ್ಟಿ ಹಾಗೂ ಮೈತ್ರಿ ಚಿತ್ರ ನಿರ್ಮಾಣ ಸಂಸ್ಥೆ ವಿರುದ್ಧ, ಹೈಕೋರ್ಟ್ ವಕೀಲ ಮಾಮಿದಾಳ್ ತಿರುಮಲ್ ರಾವ್ ಎಂಬುವವರು ದೂರು ದಾಖಲಿಸಿದ್ದಾರೆ.
ಚಿತ್ರದಲ್ಲಿ ಹನುಮಾನ್ ಪಾತ್ರಧಾರಿ ರಿಷಬ್, ನಿರ್ದೇಶಕ ಪ್ರಶಾಂತ್ ವರ್ಮಾ ಮತ್ತು ಮೈತ್ರಿ ನಿರ್ಮಾಣ ಸಂಸ್ಥೆಯ ರವಿಶಂಕರ್ ಹಾಗೂ ನವೀನ್ ಯರ್ನೇನಿ ವಿರುದ್ಧ ದೂರು ದಾಖಲಿಸಲಾಗಿದೆ. ಈಗಾಗಲೇ 'ಜೈ ಹನುಮಾನ್' ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಇದರಲ್ಲಿ ರಿಷಬ್ ಹನುಮಂತನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.