ಕೋಲ್ಕತ್ತಾ: ವಿದ್ಯಾರ್ಥಿಗಳ ಹೋರಾಟ ಮತ್ತು ಸರ್ಕಾರ ಬದಲಾವಣೆಯ ಕಾರಣದಿಂದಾಗಿ ಬಾಂಗ್ಲಾದೇಶದಲ್ಲೇ ಉಳಿದಿದ್ದ ಮಿತಾಲಿ ಎಕ್ಸ್‌ಪ್ರೆಸ್ ರೈಲು 5 ತಿಂಗಳ ಬಳಿಕ ಭಾರತಕ್ಕೆ ವಾಪಸ್ಸಾಗಿದೆ.
ಬುಧವಾರ ಬೆಳಗ್ಗೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಬಿಲಹಟಿ – ಹಲ್ದಿಬರಿ ಗಡಿಯ ಮೂಲಕ ಮಿತಾಲಿ ಎಕ್ಸ್‌ಪ್ರೆಸ್ ರೈಲು ಭಾರತವನ್ನು ಪ್ರವೇಶಿಸಿದೆ. ಟ್ರೇನ್ ನಂಬರ್ 13132/31 ನ ಮಿತಾಲಿ ಎಕ್ಸ್ ಪ್ರೆಸ್ ರೈಲು ಜುಲೈ 17 ರಂದು ನ್ಯೂ ಜಲಪಾಯಿಗುರಿಯಿಂದ ಢಾಕಾಗೆ ತೆರಳಿತ್ತು. ಢಾಕಾದಿಂದ ಹೊರಟಿದ್ದ ರೈಲು ಬಾಂಗ್ಲಾದೇಶದಲ್ಲಿ ನಡೆದ ದಂಗೆಯ ಕಾರಣದಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಿತಾಲಿ ಎಕ್ಸ್‌ಪ್ರೆಸ್ ರೈಲು ಅಲ್ಲಿಯೇ ನಿಲ್ಲುವಂತಾಗಿತ್ತು.
ಈಗ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮಿತಾಲಿ ಎಕ್ಸ್‌ಪ್ರೆಸ್ ರೈಲನ್ನು ಬಾಂಗ್ಲಾದೇಶ ರೈಲ್ವೆಯ ಸಿಬ್ಬಂದಿ ಬಾಂಗ್ಲಾದೇಶದ ನಿಲ್ಬಾಮರಿಯಲ್ಲಿರುವ ಚಿಲಾಹಟಿಯಿಂದ ಭಾರತದ ಹಲ್ದಿಬರಿ ಸ್ಟೇಷನ್ ತಲುಪಿಸಿದ್ದಾರೆ. ಭಾರತದೊಳಗೆ ರೈಲನ್ನು ತಲುಪಿಸಿದ ಬಾಂಗ್ಲಾ ರೈಲ್ವೆಯ ಇಂಜಿನ್ ವಾಪಸ್ ತೆರಳಿದೆ ಎಂದು ಮಾಹಿತಿ ನೀಡಲಾಗಿದೆ.
2022 ರ ಜೂನ್ 1 ರಂದು ಬಾಂಗ್ಲಾದೇಶದ ಢಾಕಾ ಮತ್ತು ಪಶ್ಚಿಮ ಬಂಗಾಳದ ಉತ್ತರ ಭಾಗ ಮತ್ತು ಸಿಕ್ಕಿಂ ಅನ್ನು ಸಂಪರ್ಕಿಸಲು ಮಿತಾಲಿ ಎಕ್ಸ್ ಪ್ರೆಸ್ ರೈಲು ಆರಂಭಿಸಲಾಗಿತ್ತು. ಮಿತಾಲಿ ಎಕ್ಸ್‌ಪ್ರೆಸ್ ಜತೆಯಲ್ಲೇ ಢಾಕಾ ಮತ್ತು ಕೋಲ್ಕತ್ತಾ ನಡುವೆ ಮೈತ್ರಿ ಎಕ್ಸ್‌ಪ್ರೆಸ್ ಮತ್ತು ಕೋಲ್ಕತಾ ಮತ್ತು ಖುಲ್ನಾ ನಡುವೆ ಬಂಧನ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ.
ಬಾಂಗ್ಲಾದೇಶದಲ್ಲಿ ದಂಗೆ ನಡೆದ ಬಳಿಕ ಭಾರತ ಸರ್ಕಾರ ಈ ಮೂರೂ ರೈಲುಗಳ ಸಂಚಾರವನ್ನು ಅನಿರ್ದಿಷ್ಟಾವಧಿ ವರೆಗೆ ಸ್ಥಗಿತಗೊಳಿಸಿತ್ತು. ಆದರೆ ಮಿತಾಲಿ ಎಕ್ಸ್‌ಪ್ರೆಸ್ ರೈಲು ಬಾಂಗ್ಲಾದಲ್ಲೇ ಉಳಿದಿದ್ದರಿಂದ ಈಗ ಆ ರೈಲನ್ನು ವಾಪಸ್ ತರಿಸಿಕೊಳ್ಳಲಾಗಿದೆ.