ದುಬೈ: ಅಡಿಲೇಡ್ ಟೆಸ್ಟ್ ವೇಳೆ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ನಡುವೆ ನಡೆಸಿದ್ದ ಮಾತಿನ ಚಕಮಕಿಯನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದ್ದು, ಇಬ್ಬರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯ ಎರಡನೇ ಟೆಸ್ಟ್ ಪಂದ್ಯದ ವೇಳೆ, ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ನ 82ನೇ ಓವರ್ನಲ್ಲಿ ಸಿರಾಜ್ ಎಸೆದ ಯಾರ್ಕರ್ ಎಸೆತಕ್ಕೆ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್ ಆಗಿದ್ದರು. ಹೆಡ್ರನ್ನು ಔಟ್ ಮಾಡಿದ್ದ ಸಿರಾಜ್, ಆಸಿಸ್ ಬ್ಯಾಟರ್‌ಗೆ ಪೆವಿಲಿಯನ್ ದಾರಿ ತೋರಿಸುವಾಗ ಆಕ್ರಮಣಕಾರಿಯಾಗಿ ವರ್ತಿಸಿದ್ದರು. ಜತೆಗೆ ಆ ವೇಳೆ ಟ್ರಾವಿಸ್ ಹೆಡ್ ಮತ್ತು ಸಿರಾಜ್ ನಡುವೆ ಮಾತಿನ ಚಕಮಕಿ ನಡೆದಿತ್ತು.
ಹೆಡ್ ಮತ್ತು ಸಿರಾಜ್ ನಡುವೆ ನಡೆದ ಈ ಮಾತಿನ ಚಕಮಕಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಜತೆಗೆ ಅಡಿಲೇಡ್ ಟ್ರಾವಿಸ್ ಹೆಡ್ ತವರಾಗಿರುವುದರಿಂದ ಸಹಜವಾಗಿಯೇ ಅವರಿಗೆ ಪ್ರೇಕ್ಷಕರಿಂದ ಹೆಚ್ಚಿನ ಬೆಂಬಲ ಸಿಕ್ಕಿತ್ತು. ಸಿರಾಜ್ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ಗೆ ನಿಂತಿದ್ದಾಗ ಆಸ್ಟ್ರೇಲಿಯಾ ಪ್ರೇಕ್ಷಕರು 'ಬೂ' ಎಂದು ಅವರನ್ನು ಅಣಕಿಸಿದ್ದರು.
ಈ ಹಿನ್ನೆಲೆಯಲ್ಲಿ ಸಿರಾಜ್ ಹಾಗೂ ಹೆಡ್ ಇಬ್ಬರೂ ಮೈದಾನದೊಳಗೆ ಕಿತ್ತಾಡಿಕೊಂಡಿದ್ದಕ್ಕಾಗಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಐಸಿಸಿ ಮುಂದಾಗಿದೆ. ಇಬ್ಬರೂ ಆಟಗಾರರನ್ನು ಅಮಾನತಿನಲ್ಲಿಡುವ ಮತ್ತು ಪಂದ್ಯದ ಸಂಭಾವನೆಯಲ್ಲಿ ಕಡಿತ ಮಾಡುವ ಸಾಧ್ಯತೆ ಇದೆ.
ಇಬ್ಬರ ನಡುವೆ ಜಗಳ ನಡೆದ ಮರುದಿನ ಸಿರಾಜ್ ಬ್ಯಾಟಿಂಗ್ಗೆ ಬಂದಾಗ, ಹೆಡ್ ಮತ್ತು ಸಿರಾಜ್ ನಡುವೆ ಸ್ವಲ್ಪ ಹೊತ್ತು ಮಾತುಕತೆ ನಡೆದಿತ್ತು. ಜತೆಗೆ ಪಂದ್ಯ ಮುಗಿದ ಬಳಿಕ ಇಬ್ಬರೂ ಪರಸ್ಪರ ಆಲಂಗಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಬ್ಬರೂ ವಿವಾದವನ್ನು ಇತ್ಯರ್ಥಪಡಿಸಿಕೊಂಡರು ಎನ್ನಲಾಗುತ್ತಿದೆ.