ವಿದೇಶ

ಅಸ್ಸಾದ್‌ ಸರ್ಕಾರದ ಪತನದ ಬಳಿಕ ತಾಯ್ನಾಡಿಗೆ ಮರಳಿದ 30000 ಸಿರಿಯನ್ನರು

ಕೆಲವು ದಿನಗಳ ಹಿಂದೆ ಬಂಡುಕೋರರು ನಡೆಸಿದ ದಾಳಿಯಲ್ಲಿ ಸಿರಿಯಾದ ಸರ್ವಾಧಿಕಾರಿಯಾಗಿದ್ದ ಬಷರ್‌ ಅಲ್‌ ಅಸ್ಸಾದ್‌ ಸೋಲೊಪ್ಪಿಕೊಂಡು ದೇಶ ತೊರೆದಿದ್ದ. ಅಸ್ಸಾದ್‌ ಆಡಳಿತದ ಅವಧಿಯಲ್ಲಿ ದೇಶ ತೊರೆದಿದ್ದ ಸಾವಿರಾರು ಸಿರಿಯನ್ನರು ಈಗ ತಾಯ್ನಾಡಿಗೆ ವಾಪಸ್ಸಾಗುತ್ತಿದ್ದಾರೆ.

ಡಮಾಸ್ಕಸ್‌: ಕೆಲವು ದಿನಗಳ ಹಿಂದೆ ಬಂಡುಕೋರರು ನಡೆಸಿದ ದಾಳಿಯಲ್ಲಿ ಸಿರಿಯಾದ ಸರ್ವಾಧಿಕಾರಿಯಾಗಿದ್ದ ಬಷರ್‌ ಅಲ್‌ ಅಸ್ಸಾದ್‌ ಸೋಲೊಪ್ಪಿಕೊಂಡು ದೇಶ ತೊರೆದಿದ್ದ. ಅಸ್ಸಾದ್‌ ಆಡಳಿತದ ಅವಧಿಯಲ್ಲಿ ದೇಶ ತೊರೆದಿದ್ದ ಸಾವಿರಾರು ಸಿರಿಯನ್ನರು ಈಗ ತಾಯ್ನಾಡಿಗೆ ವಾಪಸ್ಸಾಗುತ್ತಿದ್ದಾರೆ.

ಕಳೆದ 13 ವರ್ಷಗಳಿಂದ ಸಿರಿಯಾದಲ್ಲಿ ನಾಗರಿಕ ಯುದ್ಧ ನಡೆಯುತಿತ್ತು. ಬಷರ್‌ ಅಲ್‌ ಅಸ್ಸಾದ್‌ ಆಡಳಿತದಲ್ಲಿ ಲಕ್ಷಾಂತರ ಸಿರಿಯನ್ನರು ಕಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ 2011 ರಿಂದ ಲಕ್ಷಾಂತರ ಸಿರಿಯನ್ನರು ದೇಶ ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರು. ಅದರಲ್ಲೂ ನೆರೆಯ ಟರ್ಕಿಯಲ್ಲಿ 30 ಲಕ್ಷಕ್ಕೂ ಹೆಚ್ಚು ಸಿರಿಯನ್ನರು ಆಶ್ರಯ ಪಡೆದಿದ್ದರು.

ಈಗ ಅಬು ಮೊಹಮ್ಮದ್ ಅಲ್-ಗೊಲಾನಿ ನೇತೃತ್ವದ ಹಯಾತ್ ತಹ್ರಿರ್ ಅಲ್-ಶಾಮ್ ಬಂಡುಕೋರ ಸಂಘಟನೆ ದಂಗೆ ನಡೆಸಿ ಸಿರಿಯಾವನ್ನು ವಶಕ್ಕೆ ಪಡೆದಿದೆ. ಈ ಮೂಲಕ 50 ವರ್ಷಗಳ ಅಸ್ಸಾದ್‌ ಮನೆತನದ ಆಡಳಿಕ್ಕೆ ಕೊನೆ ಹಾಡಿದೆ. ಈ ಹಿನ್ನೆಲೆಯಲ್ಲಿ ದೇಶ ತೊರೆದಿರುವ ಸಿರಿಯನ್ನರು ತಮ್ಮ ತಾಯ್ನಾಡಿಗೆ ವಾಪಸ್‌ ಬರುತ್ತಿದ್ದಾರೆ. ಈಗಾಗಲೇ ಟರ್ಕಿಯಿಂದ 30,663 ಸಿರಿಯನ್ನರು ತಮ್ಮ ದೇಶಕ್ಕೆ ವಾಪಸ್‌ ಬಂದಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು ಸಿರಿಯಾಗೆ ವಾಪಸ್‌ ಬರುವವರಿಗೆ ನೆರವು ನೀಡಲು ಟರ್ಕಿ ವಿಶೇಷ ಕಚೇರಿಯನ್ನು ತೆರೆದಿದೆ. ಜತೆಗೆ ಡಮಾಸ್ಕಸ್‌ ನಲ್ಲಿರುವ ಟರ್ಕಿಯ ರಾಯಭಾರ ಕಚೇರಿಯನ್ನೂ ಪುನರಾರಂಭಿಸಿದೆ.