ಬಾಗಲಕೋಟೆ : ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದಲ್ಲಿ ಅತ್ತೆ, ಮಾವ ಸೇರಿಕೊಂಡು ಆಸ್ತಿಗಾಗಿ ತಮ್ಮ ಸೊಸೆಯನ್ನೇ ಮುಗಿಸಲು ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಮುತ್ತಕ್ಕಳ ಸಂಬಂಧಿಕರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಕೆರೂರು ಪೊಲೀಸರು ಭೇಟಿ ನೀಡಿದ್ದು ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಆಸ್ತಿಯಲ್ಲಿ ಪಾಲು ಕೇಳ್ತಿದ್ದ ಮುತ್ತಕ್ಕ
ಕಳೆದ ಐದು ವರ್ಷಗಳ ಹಿಂದೆ ಮತ್ತಕ್ಕನ ಪತಿ ಮೃತರಾಗಿದ್ದಾರೆ. ಹೀಗಾಗಿ ಆಸ್ತಿಯಲ್ಲಿ ಪಾಲು ಕೇಳ್ತಿದ್ದ ಮುತ್ತಕ್ಕ.ಕಳೆದೊಂದು ವಾರದ ಹಿಂದೆ ಮುತ್ತಕ್ಕನನ್ನುಊರಲ್ಲಿನ ಬಾಡಿಗೆ ಮನೆಗೆ ಶಿಫ್ಟ್ ಮಾಡಿದ್ದ ಕುಟುಂಬ,ನಿನ್ನೆ ಕಸ ಗೂಡಿಸಲು ತೋಟದ ಮನೆಗೆ ಹೋದಾಗ ಮುತ್ತಕ್ಕಗುಂಡಿ ನೋಡಿದ್ದಾಳೆ. ಗುಂಡಿ ಗಮನಿಸಿ ತವರು ಮನೆಯವರಿಗೆ ಮಾಹಿತಿ ನೀಡಿದ್ದಾಳೆ.ತಂಗಿಯ ಮಾಹಿತಿಯಂತೆ ಮುತ್ತಕ್ಕನ ಸಹೋದರ ಶಂಕರಗೌಡಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮನೆಯಲ್ಲೇ ಗುಂಡಿ ತೋಡಿ ಸಮಾಧಿಗೆ ಸ್ಕೆಚ್?
ಯಂಡಿಗೇರಿ ಗ್ರಾಮದಲ್ಲಿ ತೋಟದ ಮನೆಯಲ್ಲಿ ಸೊಸೆ ಮುತ್ತಕ್ಕ ಪೂಜಾರ ಎಂಬುವವರನ್ನು ಹತ್ಯೆ ಮಾಡಲುಸ್ಕೆಚ್ ಹಾಕಲಾಗಿತ್ತು ಎಂದು ಆರೋಪಿಸಲಾಗಿದೆ. ಮಾವ ರಾಮಣ್ಣ ಪೂಜಾರ, ಅತ್ತೆ ಪಾರ್ವತಿ ಪೂಜಾರ ತಮ್ಮ ತೋಟದ ಮನೆಯಲ್ಲಿ ಸುಮಾರು 5 ಅಡಿ ಆಳ ಮತ್ತು ಐದು ಅಡಿ ಅಗಲದ ಗುಂಡಿ ತೋಡಿ ಮುತ್ತಕ್ಕ ಪೂಜಾರ ಅವರನ್ನು ಜೀವಂತ ಸಮಾಧಿ ಮಾಡಲು ಸ್ಕೆಚ್ ಹಾಕಿದ್ದರು ಎನ್ನಲಾಗಿದೆ.
ಮುತ್ತಕ್ಕನ ಸಹೋದರನ ಆರೋಪ
ಮುತ್ತಕ್ಕ ಪೂಜಾರ ಅವರ ಸಹೋದರ ನಾಗರೆಡ್ಡಿ ಈ ಆರೋಪ ಮಾಡಿದ್ದು, ಅತ್ತೆ, ಮಾವ ಮತ್ತು ನಾದಿನಿ ಎಲ್ಲರೂ ಸೇರಿಕೊಂಡು ತನ್ನ ಸಹೋದರಿಯನ್ನು ಬಲಿ ಕೊಡಲು ಮುಂದಾಗಿದ್ದರು ಎಂದು ಆರೋಪಿಸಿದ್ದಾರೆ. ಬಲಿ ಕೊಡಲು ಮನೆಯಲ್ಲಿ ತಗ್ಗು ತೋಡಿದ್ದರು ಆದರೆ ಮುತ್ತಕ್ಕ ಅವರ ಸಂಬಂಧಿಕರು ಊರಿಗೆ ಬರುವ ವಿಚಾರ ತಿಳಿದು ಆ ಗುಂಡಿಯನ್ನು ಮುಚ್ಚಿದ್ದಾರೆ ಎಂದು ಹೇಳಲಾಗಿದೆ.
ಮನೆಯಲ್ಲಿ ಮಾಟ ಮಾಡಿ ಗೊಂಬೆ ಹೂತಿರುವ ಬಗ್ಗೆ
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ರಾಮಣ್ಣ ಪೂಜಾರ ಮತ್ತು ಅತ್ತೆ ಪಾರ್ವತಿ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ನಮ್ಮ ಇಬ್ಬರೂ ಗಂಡು ಮಕ್ಕಳು, ಮೃತಪಟ್ಟಿದ್ದು ಈ ಬಗ್ಗೆ ವಿಚಾರ ಮಾಡಿದಾಗ ಯಾರೋ ವಾಮಾಚಾರ ಮಾಡಿ ಮನೆಯಲ್ಲಿ ಒಂದು ಗೊಂಬೆಯನ್ನು ಊತುಹಾಕಿದ್ದಾರೆ ಎಂದು ಹೇಳಿದ್ರು. ಅದನ್ನು ತೆಗೆಯೋದಕ್ಕಾಗಿ ಗುಂಡಿ ತೋಡಲಾಗಿತ್ತು. ಅಮಾವಾಸ್ಯೆ ದಿನ ಗುಂಡಿ ತೆಗೆದು ನೋಡಿದಾಗ ಆ ಜಾಗದಲ್ಲಿ ಒಂದು ಗೊಂಬೆ ಸಿಕ್ಕಿದ್ದು ಅದನ್ನು ಸುಟ್ಟುಹಾಕಿದ್ದೇವೆ. ನಮಗೆ ಯಾವುದೇ ನಿಧಿ ಆಸೆ ಇಲ್ಲ ಮತ್ತು ಸೊಸೆಯನ್ನು ಬಲಿ ಕೊಡುವ ಉದ್ದೇಶ ಇಲ್ಲ. ಇದು ಸುಳ್ಳು ಆರೋಪ ಎಂದು ಸೊಸೆ ಮುತ್ತಕ್ಕ ಪೂಜಾರ ಅವರ ಆರೋಪದ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಎರಡೂ ಕುಟುಂಬಸ್ಥರನ್ನು ಠಾಣೆಗೆ ಕರೆಸಿರುವ ಪೊಲೀಸರು, ಘಟನೆ ಬಗ್ಗೆ ಕೂಲಂಕುಷವಾಗಿ ತನಿಖೆ ಕೈಗೊಂಡಿದ್ದಾರೆ.