ಕ್ರೀಡೆಗಳು

ಜಾಹೀರಾತು ಒಪ್ಪಂದದಲ್ಲಿ ಶಾರುಖ್‌, ಅಮಿತಾಬ್‌ ಹಿಂದಿಕ್ಕಿದ ಧೋನಿ…

ಧೋನಿ ಈಗಲೂ ಹೆಚ್ಚು ಜನಪ್ರಿಯ ಸೆಲೆಬ್ರಿಟಿಯಾಗಿದ್ದು ಅವರು ಜಾಹೀರಾತು ಒಪ್ಪಂದಗಳಲ್ಲಿ ಬಾಲಿವುಡ್‌ ನಟರಾದ ಶಾರುಖ್‌ ಖಾನ್‌ ಮತ್ತು ಅಮಿತಾಬ್‌ ಬಚ್ಚನ್‌ ರನ್ನೇ ಹಿಂದಿಕ್ಕಿದ್ದಾರೆ.

ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ರೂ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ಧೋನಿ ಈಗಲೂ ಹೆಚ್ಚು ಜನಪ್ರಿಯ ಸೆಲೆಬ್ರಿಟಿಯಾಗಿದ್ದು ಅವರು ಜಾಹೀರಾತು ಒಪ್ಪಂದಗಳಲ್ಲಿ ಬಾಲಿವುಡ್‌ ನಟರಾದ ಶಾರುಖ್‌ ಖಾನ್‌ ಮತ್ತು ಅಮಿತಾಬ್‌ ಬಚ್ಚನ್‌ ರನ್ನೇ ಹಿಂದಿಕ್ಕಿದ್ದಾರೆ.

ಟಾಮ್‌ ಮೀಡಿಯಾ ರಿಸರ್ಚ್‌ (TAM Media Research) ಬಿಡುಗಡೆ ಮಾಡಿರುವ ವರದಿಯ ಪ್ರಕಾರ 2024ರ ಮೊದಲ 6 ತಿಂಗಳ ಅವಧಿಯಲ್ಲಿ ಧೋನಿ 42 ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದಾರೆ. ಇದು ಶಾರೂಖ್‌ ಮತ್ತು ಬಚ್ಚನ್‌ಗಿಂತಲೂ ಹೆಚ್ಚಿದೆ. ಇದು ಧೋನಿ ಬ್ರ್ಯಾಂಡ್‌ ಮೌಲ್ಯವನ್ನು ತೋರಿಸುತ್ತಿದೆ.

2024 ರಲ್ಲಿ ಧೋನಿ ಸಿಟ್ರಾನ್‌ ಕಾರು ಕಂಪನಿ, ಡ್ರೋನ್ ಸ್ಟಾರ್ಟ್ಅಪ್ ಗರುಡಾ ಏರೋಸ್ಪೇಸ್, ಫ್ಲಿಪ್‌ಕಾರ್ಟ್ ಒಡೆತನದ ಕ್ಲಿಯರ್‌ಟ್ರಿಪ್, ಪೆಪ್ಸಿಕೋ ಕಂಪನಿಯ ಲೇಸ್‌, ಇಮೊಟೊರಾಡ್, ಮಾಸ್ಟರ್‌ಕಾರ್ಡ್, ಗಲ್ಫ್ ಆಯಿಲ್, ಓರಿಯಂಟ್ ಎಲೆಕ್ಟ್ರಿಕ್ ಮತ್ತು ಎಕ್ಸ್‌ಪ್ಲೋಸಿವ್‌ ವೇ ಪ್ರಚಾರಕ್ಕಾಗಿ ಒಪ್ಪಂದ ಮಾಡಿಕೊಂಡಿದಾರೆ. ಇತ್ತೀಚೆಗೆ ಧೋನಿ ಯೂರೋಗ್ರಿಪ್‌ ಟಯನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದಾರೆ.

ಧೋನಿ 42 ಬ್ರ್ಯಾಂಡ್‌ಗಳ ಜತೆ ಒಪ್ಪಂದ ಮಾಡಿಕೊಂಡಿದಾರೆ. ಆದರೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಪ್ರತಿದಿನ ಪ್ರಸಾರವಾಗುವ ಜಾಹೀರಾತುಗಳಲ್ಲಿ ಅತೀ ಹೆಚ್ಚಿನ ಅವಧಿಗೆ ಟಿವಿ ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳುತ್ತಾರೆ. ಅಕ್ಷಯ್‌ ಕುಮಾರ್‌ ಎಲ್ಲಾ ಬ್ರ್ಯಾಂಡ್‌ಗಳ ಜಾಹೀರಾತಿನಿಂದ ಸರಾಸರಿ 22 ಗಂಟೆ ಸ್ಕ್ರೀನ್‌ ಮೇಲೆ ಕಾಣಿಸಿಕೊಂಡರೆ, ಶಾರೂಖ್‌ ಖಾನ್‌ 20 ಗಂಟೆ, ಅಮಿತಾಬ್‌ ಬಚ್ಚನ್‌ 16 ಗಂಟೆ ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳುತ್ತಾರೆ. ಧೋನಿ ಟಿವಿ ಸ್ಕ್ರೀನ್‌ಗಳ ಮೇಲೆ ಸುಮಾರು 14 ಗಂಟೆ ಕಾಣಿಸಿಕೊಳ್ಳುತ್ತಾರೆ.