ಮೈಸೂರು : ಅಧಿಕಾರದ ದಾಹ , ಅನುದಾನದ ಲೂಟಿಗೆ ಅಮಾಯಕ ವ್ಯಕ್ತಿಯ ಹತ್ಯೆಯಾಗಿದ್ದು, ಡಾಬಾದಲ್ಲಿ ಡ್ರಿಂಕಿಂಗ್, ಮತ್ತಿನಲ್ಲಿ ಮರ್ಡರ್ ಮಾಡಲಾಗಿದೆ. ಸದ್ಯ, ಕಿರಾತಕರು ಕೊಲೆ ಮಾಡಿ ಸಿಕ್ಕಿ ಬಿದ್ದು ಕಂಬಿ ಎಣಿಸುತ್ತಿದ್ದಾರೆ. ಪೊಲೀಸರ ಕಾರ್ಯಾಚರಣೆಯಿಂದ ನಾಲ್ವರು ಅಂದರ್ ಆಗಿದ್ದಾರೆ. ತಪ್ಪಿಸಿಕೊಂಡ ಮತ್ತೊಬ್ಬ ಕ್ರಿಮಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆ ಸಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಪತಿ ಅನುಮಾನಾಸ್ಪದವಾಗಿ ಸಾವಿಗೀಡಾದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಂಜನಗೂಡು ಗ್ರಾಮಾಂತರ ಪೊಲೀಸರು ಈ ಪ್ರಕರಣವನ್ನು ಬೇಧಿಸಿದರು. ಬಿಜೆಪಿ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಗೋವರ್ಧನ್ (36) ಸೇರಿ ನಾಲ್ವರ ಬಂಧನವಾಗಿದೆ. ನಂಜನಗೂಡಿನ ನೀಲಕಂಠ ನಗರ ನಿವಾಸಿ ಜಾಹಿರ್ (25), ಹಳ್ಳದಕೇರಿ ನಿವಾಸಿ ಮಣಿಕಂಠ (24), ಕೆಎಚ್‌ಬಿ ಕಾಲೋನಿ ನಿವಾಸಿ ಮಹೇಂದ್ರ (25) ಬಂಧಿತ ಆರೋಪಿಗಳಾಗಿದ್ದಾರೆ. ದೇವರಸನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಸೌಭಾಗ್ಯರವರ ಪತಿ ಕೆಬ್ಬೇಪುರ ಗ್ರಾಮದ ನಂಜುಂಡಸ್ವಾಮಿ(47) ಅವರನ್ನ ಹತ್ಯೆಮಾಡಿದ್ದರು.
ಹೊಸೂರು ಸಮೀಪ ಅ 6ರಂದು ಗಾಯಗೊಂಡ ಸ್ಥಿತಿಯಲ್ಲಿ ನಂಜುಂಡಸ್ವಾಮಿ ಪತ್ತೆಯಾಗಿದ್ದರು. ಕೈಕಾಲು ಮುರಿದು, ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬತ್ತದ ಗದ್ದೆಯಲ್ಲಿ ಬಿಸಾಡಿ ಅಪಘಾತ ಎಂಬಂತೆ ಬಿಂಬಿಸಿದ್ದರು. ಈ ಸಂಬಂಧ ತನ್ನ ಪತಿಯನ್ನ ರಾಜಕೀಯ ಪ್ರೇರಿತವಾಗಿ ಕೊಲೆಮಾಡಿದ್ದಾರೆಂದು ಪತ್ನಿ ದೂರು ದಾಖಲಿಸಿದ್ದರು. ಸೌಭಾಗ್ಯ ಅವರು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಸೌಭಾಗ್ಯ ಅವರಿಗೆ ಅಧಿಕಾರ ನೀಡಿದರೆ ಗೋವರ್ಧನ್ ತನ್ನ ಅಸ್ತಿತ್ವ ಹೋಗುತ್ತದೆ ಎಂದುಕೊಂಡಿದ್ದರು. ಅಲ್ಲದೇ ಗ್ರಾಪಂಗೆ ಬಂದಿದ್ದ ಕೋಟ್ಯಾಂತರ ರೂ ಅನುದಾನದ ಕಮೀಷನ್ ಕೈ ತಪ್ಪುತ್ತೆ ಎಂಬ ಆತಂಕದಿಂದ ಆ ಕಾರಣಕ್ಕೆ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದರು.ಸದ್ಯ ಪೊಲೀಸರ ತನಿಖೆಯಿಂದ ಆರೋಪಿಗಳ ಬಂಧನವಾಗಿದೆ.