ಬೆಂಗಳೂರು: ನಮ್ಮ ಮೆಟ್ರೋದ ಗುಲಾಬಿ ಮಾರ್ಗದ ಕಾಳೇನ ಅಗ್ರಹಾರದಿಂದ - ನಾಗವಾರದವರೆಗಿನ ಕಾಮಗಾರಿ ಸಂಪೂರ್ಣವಾಗಿದೆ.
ನಾಗಾವಾರ ನಿಲ್ದಾಣದಲ್ಲಿ ಬುಧವಾರ ಕೊನೆಯದಾಗಿ ಸುರಂಗ ಕೊರೆಯುವ ಭದ್ರಾ ಟಿಬಿಎಂ 937 ಮೀಟರ್ ಸುರಂಗ ಕೊರೆದು ಹೊರಬಂದಿದೆ. ಭದ್ರಾ ಟಿಬಿಎಂ ಅನ್ನು 2024ರ ಏಪ್ರಿಲ್ 2ರಂದು ಕೆಜಿ ಹಳ್ಳಿ ನಿಲ್ದಾಣದಿಂದ ಸುರಂಗ ಕೊರೆಯಲು ನಿಯೋಜಿಸಲಾಗಿತ್ತು. ಈ ಮೂಲಕ ಗುಲಾಬಿ ಮಾರ್ಗದ 20,992 ಮೀಟರ್ ಸುರಂಗ ಕೆಲಸ ಪೂರ್ಣಗೊಂಡಿದೆ.
ಎಷ್ಟು ನಿಲ್ದಾಣ? ಯಾವಾಗಿನಿಂದ ಸಂಚಾರ ಆರಂಭ?
ಹಂತ - 2ರ ಯೋಜನೆಯಡಿ ರೀಚ್ - 6 ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21.26 ಕಿ.ಮೀ. ಉದ್ದವಿದೆ. ಇದು 18 ನಿಲ್ದಾಣಗಳನ್ನು ಹೊಂದಿದೆ. ಇದರಲ್ಲಿ 7.50 ಕಿ.ಮೀ. ಎತ್ತರಿಸಿದ ಮಾರ್ಗವಾಗಿದೆ. ಕಾಳೇನ ಅಗ್ರಹಾರದಿಂದ ಸ್ವಾಗತ್ ರಸ್ತೆವರೆಗೆ 6 ನಿಲ್ದಾಣ ಮತ್ತು 13.76 ಕಿ.ಮೀ. ಸುರಂಗ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರದವರೆಗೆ 12 ನಿಲ್ದಾಣಗಳನ್ನು ಒಳಗೊಂಡಿದೆ. ಸುರಂಗ ಮಾರ್ಗದ ಶೇ.90ರಷ್ಟು ನಿಲ್ದಾಣಗಳ ಸಿವಿಲ್ ಕಾಮಗಾರಿ ಕೂಡ ಮುಕ್ತಾಯವಾಗಿದೆ. ವರದಿಗಳ ಪ್ರಕಾರ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, 2025ರ ವೇಳೆ ಈ ಮಾರ್ಗದ ವಾಣಿಜ್ಯ ಸಂಚಾರ ಆರಂಭಿಸುವ ನಿರೀಕ್ಷೆಯನ್ನು ಹೊಂದಿದೆ.