ಚನ್ನಪಟ್ಟಣ : ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವೇಗವಾಗಿ ಅಭಿವೃದ್ದಿ ಹೊಂದುತ್ತಿದೆ. ಅವರ ಸಂಪುಟದಲ್ಲಿ ಕುಮಾರಸ್ವಾಮಿ ಅವರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಬರೀ ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಅಧಿಕಾರಕ್ಕೆ ಬಂದಾಗಿನಿಂದ ಹಗರಣಗಳಲ್ಲಿಯೇ ಮುಳುಗಿದೆ ಎಂದು ಮೈಸೂರು ಕೊಡಗು ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಮೂಡಾ ಹಗರಣದ ವಿರುದ್ಧ ಬೆಂಗಳೂರಿನಿಂದ ಮೈಸೂರುವರೆಗೂ ನಡೆದ ಪಾದಯಾತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರೂ ಪ್ರಮುಖ ಪಾತ್ರ ವಹಿಸಿದ್ದರು. ಅವರಿಗೆ ಮುಂದೆ ಒಳ್ಳೆಯ ನಾಯಕನಾಗಿ ಬೆಳೆಯುವ ಎಲ್ಲಾ ಅವಕಾಶಗಳು ಇವೆ. ಅಂತಹ ಅವಕಾಶಕ್ಕೆ ಚನ್ನಪಟ್ಟಣದ ಜನರೇ ನಾಂದಿ ಹಾಡಬೇಕು ಎಂದು ಹೇಳಿದರು. ಇದಕ್ಕೂ ಮೊದಲು ಕೇಂದ್ರ ಸಚಿವರು ಯದುವೀರ್ ಅವರೊಂದಿಗೆ ಪಕ್ಷದ ಹಿರಿಯ ಮುಖಂಡ ಟಿ.ಪಿ.ಪುಟ್ಟಸಿದ್ದೇಗೌಡ ಅವರ ಮನೆಗೆ ಭೇಟಿ ನೀಡಿದ್ದರು. ಇದೇ ವೇಳೆ ಕೇಂದ್ರ ಸಚಿವರ ಜತೆ ಯದುವೀರ್ ಅವರು ಸಾಥ್ ನೀಡಿದ್ದಾರೆ.