ರಾಮನಗರ : ನಿಖಿಲ್ ಕುಮಾರಸ್ವಾಮಿ ಅವರು ಎನ್ ಡಿಎ ಅಭ್ಯರ್ಥಿ ಆಗಿದ್ದು ದೇವರ ನಿರ್ಧಾರ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಈಗ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ವ್ಯಕ್ತಿ ಎನ್ ಡಿಎ ಅಭ್ಯರ್ಥಿ ಆಗಬೇಕಿತ್ತು. ಅವರು ಮೊದಲು ನನಗೆ ಟಿಕೆಟ್ ಬೇಕು ಎಂದು ಕೇಳಿದರು. ಆಮೇಲೆ, ಕಮಲ ಚಿಹ್ನೆ ಆದರೇನು, ತೆನೆ ಹೊತ್ತ ಮಹಿಳೆಯ ಚಿಹ್ನೆ ಆದರೇನು. ಚುನಾವಣೆಗೆ ನಿಲ್ಲಲು ಸೈ ಎಂದು ಹೇಳಿಕೊಂಡಿದ್ದರು.
ಇದೇ ವೇಳೇ ಮಾತನಾಡಿದ ಅವರು, ಅವರ ಮಾತುಗಳಿಗೆ ನಾವೂ ಮರುಳಾದೆವು. ಜೆಡಿಎಸ್ ಚಿಹ್ನೆ ಅಡಿಯಲ್ಲಿ ನಿಲ್ಲಲ್ಲ, ಆಮೇಲೆ ಕಮಲ ಚಿಹ್ನೆಯೇ ಬೇಕು ಹೊಸ ವರಸೆ ತೆಗೆದರು. ಅದಕ್ಕೂ ನಾವು ಒಪ್ಪಿದೆವು. ಹಿರಿಯರಾದ ಜೆಪಿ ನಡ್ದಾ, ಪ್ರಹ್ಲಾದ್ ಜೋಷಿ ಅವರು ನನಗೇ ಕರೆ ಮಾಡಿ ಆ ವ್ಯಕ್ತಿಗೆ ಟಿಕೆಟ್ ಕೊಡಿ ಎಂದು ಹೇಳಿದರು. ಅವರ ಮಾತು ಮೀರದೆ ಅವರಿಗೆ ಟಿಕೆಟ್ ಕೊಡಲು ತೀರ್ಮಾನ ಮಾಡಿದೆ. ಆದರೆ, ಆ ವ್ಯಕ್ತಿ ಎಲ್ಲರಿಗೂ ಟೋಪಿ ಹಾಕಿ ಹೋದರು ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಚನ್ನಪಟ್ಟಣದಲ್ಲಿ ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ನಾಯಕರು ಕುಮಾರಸ್ವಾಮಿಗೆ ಕ್ಷೇತ್ರದಲ್ಲಿ ಎಷ್ಟು ಕೆರೆ ಇದೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ನಾನು ಎಷ್ಟು ಕಡೆ ಭೇಟಿ ಕೊಟ್ಟಿದ್ದೇನೆ, ಎಷ್ಟು ಕೆರೆಗಳಿಗೆ ನೀರು ಹರಿಸಿದ್ದೇನೆ. ದಾಖಲೆಗಳಿವೆ, ಬೇಕಾದರೆ ನೋಡಿಕೊಳ್ಳಬಹುದು ಎಂದು ಅವರು ಹೇಳಿದರು.