ನವದೆಹಲಿ: ಐಪಿಎಲ್ ಸೀಸನ್ 2025ಕ್ಕೆ ಸಿದ್ಧತೆ ನಡೆದಿದ್ದು ಮೆಗಾ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ಆಟಗಾರರನ್ನು ಖರೀದಿಸಿವೆ. ಈಗ ತಂಡದ ಸಂಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಯಾರಾಗ್ತಾರೆ ಅನ್ನೋ ಚರ್ಚೆಗೆ ಉತ್ತರ ಸಿಕ್ಕಂತಿದೆ.
ಲಕ್ನೋ ಸೂಪರ್ ಜೈಂಟ್ಸ್ ತೊರೆದಿದ್ದ ಕೆ.ಎಲ್. ರಾಹುಲ್ ರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಕೋಟಿಗೆ ಖರೀದಿ ಮಾಡಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದ ಪಾಫ್ ಡುಪ್ಲೆಸಿಸ್ ರನ್ನೂ ಡೆಲ್ಲಿ ತಂಡ ಖರೀದಿ ಮಾಡಿದೆ. ಮೊದಲ ದಿನದ ಹರಾಜಿನಲ್ಲಿ ರಾಹುಲ್ ರನ್ನು ಖರೀದಿ ಮಾಡಿದಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಾಹುಲ್ ಕ್ಯಾಪ್ಟನ್ ಆಗುತ್ತಾರೆ ಎನ್ನಲಾಗ್ತಿತ್ತು. ಇನ್ನು ಎರಡನೇ ದಿನದ ಹರಾಜಿನಲ್ಲಿ ಪಾಫ್ ಡುಪ್ಲೆಸಿಸ್ ರನ್ನು ಖರೀದಿ ಮಾಡಿದ ಬಳಿಕ ನಾಯಕತ್ವಕ್ಕಾಗಿ ಇಬ್ಬರ ಹೆಸರೂ ಕೇಳಿ ಬರುತ್ತಿತ್ತು.
ಆದರೆ ಈಗ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಪಟ್ಟದ ವಿಚಾರದಲ್ಲಿ ಹೊಸ ಹೆಸರು ಕೇಳಿ ಬರುತ್ತಿದೆ. ಫ್ರಾಂಚೈಸಿದ ಸಹ ಮಾಲೀಕ ಪಾರ್ಥ್ ಜಿಂದಾಲ್ ನಾಯಕತ್ವ ಯಾರಿಗೆ ನೀಡಬಹುದು ಅನ್ನೋ ಪ್ರಶ್ನೆಗೆ ಕೆಎಲ್ ರಾಹುಲ್ ಅಥವಾ ಫಾಫ್ ಡು ಪ್ಲೆಸಿಸ್ ಬಗ್ಗೆ ಮಾತೇ ಆಡಿಲ್ಲ. ಅನುಭವಿ ಆಲೌ ರೌಂಡರ್ ಅಕ್ಷರ್ ಪಟೇಲ್ ನಾಯಕರಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಆದರೆ ಅಂತಿಮ ನಿರ್ಧಾರವನ್ನು ತಂಡದ ಕೋಚಿಂಗ್ ಸ್ಟಾಫ್ ತೆಗೆದುಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಅಕ್ಷರ್ ಪಟೇಲ್ ನೇಮಕವಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಅಕ್ಷರ್ ಪಟೇಲ್ ನಾಯಕರಾದರೆ ಕೆ.ಎಲ್. ರಾಹುಲ್‌ಗೆ ನಿರಾಸೆಯಾಗುವುದು ಪಕ್ಕಾ.