ಚಿತ್ರದುರ್ಗ : ಇತ್ತೀಚಿನ ದಿನಗಳಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿವೆ, ಕ್ಷುಲ್ಲಕ ವಿಚಾರಕ್ಕೆ ಹೆತ್ತ ತಂದೆಯನ್ನೆ ಮಕ್ಕಳು ಕೊಲೆ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ. ಅಂತಹದ್ದೆ ಒಂದು ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದ್ದು, ಮಗನೊಬ್ಬ ತನಗೆ 30 ವರ್ಷವಾದರೂ ಇನ್ನು ಮದುವೆ ಮಾಡಿಲ್ಲವೆಂದು ತಂದೆಯ ಮೇಲೆ ಕೋಪಗೊಂಡು ಕೊಲೆ ಮಾಡಿದ್ದಾನೆ. ರಂಗಸ್ವಾಮಿ (50) ಮೃತ ದುರ್ದೈವಿಯಾಗಿದ್ದಾರೆ.
ರಾತ್ರಿ ಊಟಕ್ಕೆ ಮೊಟ್ಟೆ ಕೊಡಲಿಲ್ಲ ಎಂದು ಮಗ ದೇವರಾಜ (30) ತಂದೆ ಜೊತೆ ಜಗಳವಾಡಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿದೆ. ಇದೇ ವೇಳೆ ಮಗ ಎಲ್ಲಾ ವಿಚಾರದಲ್ಲಿ ನನ್ನನ್ನು ಕಡೆಗಣಿಸುತ್ತಾ ಬಂದಿದ್ದೀರಾ, ಮದುವೆ ಕೂಡ ಮಾಡಿಸಿಲ್ಲ ಎಂದು ಬೈದಿದ್ದಾನೆ. ಈ ವೇಳೆ ತಂದೆ ಕೂಡಾ ಸುಮ್ಮನಾಗದೆ ಎದುರು ಮಾತನಾಡಿದ್ದು, ಇದರಿಂದ ಮತ್ತೆ ಸಿಟ್ಟಾದ ಮಗ ದೇವರಾಜ ತಂದೆಯ ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಕಾಲಿಟ್ಟು ಬಲವಾಗಿ ತುಳಿದು ಹಲ್ಲೆ ನಡೆಸಿ ತಂದೆಯನ್ನ ಸಾಯಿಸಿದ್ದಾನೆ. ಸದ್ಯ ಈ ಘಟನೆಯ ಸಂಬಂಧ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ದೇವರಾಜನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.