ವಿದೇಶ

ಜಿಹಾದಿ ಪಡೆಗಳ ಕೈವಶವಾದ ಸಿರಿಯಾ… ದೇಶ ತೊರೆದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್

ಜಿಹಾದಿ ಪಡೆಗಳು ಸಿರಿಯಾದ ರಾಜಧಾನಿಯನ್ನು ವಶಪಡಿಸಿಕೊಂಡಿವೆ. ಜಿಹಾದಿ ಪಡೆಗಳಿಗೆ ಜಯ ದೊರೆಯುತ್ತಿದ್ದಂತೆ ಅಧ್ಯಕ್ಷ ಬಶರ್‌ ಅಲ್‌ ಅಸ್ಸಾದ್‌ ದೇಶ ತೊರೆದಿದ್ದಾರೆ.

ಡಮಾಸ್ಕಸ್‌ (ಸಿರಿಯಾ): ಮಧ್ಯಪ್ರಾಚ್ಯದ ಸಿರಿಯಾದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಸಂಘರ್ಷ ಅಂತ್ಯವಾಗಿದ್ದು ಜಿಹಾದಿ ಪಡೆಗಳು ಸಿರಿಯಾದ ರಾಜಧಾನಿಯನ್ನು ವಶಪಡಿಸಿಕೊಂಡಿವೆ. ಜಿಹಾದಿ ಪಡೆಗಳಿಗೆ ಜಯ ದೊರೆಯುತ್ತಿದ್ದಂತೆ ಅಧ್ಯಕ್ಷ ಬಶರ್‌ ಅಲ್‌ ಅಸ್ಸಾದ್‌ ದೇಶ ತೊರೆದಿದ್ದಾರೆ.

ಅಲ್ ಖೈದಾ ಜೊತೆ ಸಂಪರ್ಕ ಹೊಂದಿರುವ ಉಗ್ರಗಾಮಿ ಗುಂಪಾದ ತಹ್‌ರಿರ್ ಅಲ್ ಶಮ್ ಮತ್ತು ಸಿರಿಯನ್ ನ್ಯಾಷನಲ್ ಆರ್ಮಿ ಹೋರಾಟಗಾರರು ನವೆಂಬರ್‌ 27 ರಂದು ಸಿರಿಯಾ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದವು. ಜಿಹಾದಿ ಪಡೆಗಳು ಮತ್ತು ಸಿರಿಯಾ ಸೇನೆಯ ನಡುವೆ ಭಾರಿ ಕಾಳಗ ನಡೆದಿತ್ತು. ಜಿಹಾದಿ ಪಡೆಗಳು ಸಿರಿಯಾದ ರಾಜಧಾನಿ ಡಮಾಸ್ಕಸ್‌ ಸೇರಿದಂತೆ ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿದೆ.

ಜಿಹಾದಿ ಪಡೆಗಳು ನಗರಕ್ಕೆ ಮುತ್ತಿಗೆ ಹಾಕುತ್ತಿದ್ದಂತೆ ಸಿರಿಯಾ ಸೈನಿಕರು ಏರ್‌ಪೋರ್ಟ್‌ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ತೊರೆದು ಓಡೆಹೋಗಿದ್ದಾರೆ. ಅದರಲ್ಲೂ ಸ್ವತಃ ಸಿರಿಯಾ ಅಧ್ಯಕ್ಷ ಬಶರ್‌ ಅಲ್‌ ಅಸ್ಸಾದ್‌ ತಲೆಮರೆಸಿಕೊಂಡಿದ್ದು, ದೇಶ ತೊರೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಇನ್ನು ಸಿರಿಯಾದ ಪ್ರಧಾನಿ ಮೊಹಮ್ಮದ್ ಗಾಜಿ ಅಲ್-ಜಲಾಲಿ ಅಧಿಕಾರ ಹಸ್ತಾಂತರಕ್ಕೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಕಳೆದ 13 ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಸಿರಯಾ ಈಗ ಧಗಧಗಿಸಿ ಉರಿದಿದ್ದು ಮತ್ತೊಮ್ಮೆ ಜಿಹಾದಿ ಪಡೆಗಳು ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿವೆ. ಈ ಹಿಂದೆ ಐಸಿಸ್‌ ಉಗ್ರರು ಸಿರಿಯಾವನ್ನು ಆಕ್ರಮಿಸಿಕೊಂಡಿದ್ದು, ಐಸಿಸ್‌ ಅವಧಿಯಲ್ಲಿ ಬಹುಪಾಲು ಸಿರಿಯಾ ನಾಶವಾಗಿತ್ತು. ಈಗ ಮತ್ತೊಮ್ಮೆ ಜಿಹಾದಿ ಪಡೆಗಳು ದೇಶವನ್ನು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಿರಿಯಾ ನಾಗರಿಕರು ಆತಂಕಕ್ಕೀಡಾಗಿದ್ದಾರೆ.