ಕೊನಕ್ರಿ (ಗಿನಿಯಾ): ಆಫ್ರಿಕಾದ ಗಿನಿಯಾ ದೇಶದಲ್ಲಿ ನಡೆದ ಫುಟ್‌ಬಾಲ್ ಪಂದ್ಯವೊಂದರ ವೇಳೆ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದ್ದು ಘಟನೆಯಲ್ಲಿ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದಾರೆ.
ಆಫ್ರಿಕಾದ ಪಶ್ಚಿಮ ಭಾಗದಲ್ಲಿರುವ ಗಿನಿಯಾ ದೇಶದ ಎನ್'ಜೆರೆಕೋರ್‌ನಲ್ಲಿ ನಡೆದ ಫುಟ್ ಬಾಲ್ ಪಂದ್ಯದ ವೇಳೆ ಎರಡೂ ತಂಡಗಳ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣ ಮತ್ತು ರಸ್ತೆಗಳಲ್ಲಿ ಫುಟ್‌ಬಾಲ್ ಅಭಿಮಾನಿಗಳು ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ 100 ಕ್ಕೂ ಹೆಚ್ಚು ಜನರ ಮೃತಪಟ್ಟಿದಾರೆ.
ಆಸ್ಪತ್ರೆಯ ಶವಾಗಾರ ಸಂಪೂರ್ಣವಾಗಿ ತುಂಬಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಶವಗಳ ರಾಶಿ ಕಾಣುತ್ತಿದೆ. ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಲು ಸ್ಥಳವಿಲ್ಲದೆ, ಹಜಾರದಲ್ಲೇ ನೂರಾರು ಜನ ಮಲಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರೊಬ್ಬರು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದಾರೆ.
ಸ್ಥಳೀಯ ತಂಡಗಳ ನಡುವೆ ನಡೆಯುತ್ತಿದ್ದ ಫುಟ್‌ಬಾಲ್ ಪಂದ್ಯದ ವೇಳೆ ರೆಫ್ರಿ ನೀಡಿದ ತೀರ್ಪನ್ನು ವಿರೋಧಿಸಿ ಅಭಿಮಾನಿಗಳು ಮೈದಾನದೊಳಗೆ ನುಗ್ಗಿದ್ದರು. ಈ ವೇಳೆ ಮಾರಾಮಾರಿ ಆರಂಭವಾಗಿದೆ. ಪಅಭಿಮಾನಿಗಳು ಎನ್'ಜೆರೆಕೋರ್ ನಲ್ಲಿ ಹಲವು ಪೊಲೀಸ್ ಠಾಣೆಗಳಿಗೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.